ADVERTISEMENT

ಯುವಜನರ ನಿರಾಸಕ್ತಿ: ಕಳಾಹೀನ ಮೇಳ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST
ಯುವಜನರ ನಿರಾಸಕ್ತಿ: ಕಳಾಹೀನ ಮೇಳ
ಯುವಜನರ ನಿರಾಸಕ್ತಿ: ಕಳಾಹೀನ ಮೇಳ   

ಗಂಗಾವತಿ: ಅಧಿಕಾರಿಗಳ ಬೇಜವಾಬ್ದಾರಿ, ಪ್ರಚಾರದ ಕೊರತೆ ಮತ್ತು ಯುವಜನರಲ್ಲಿರುವ ನಿರಾಸಕ್ತಿಯಿಂದಾಗಿ ಯುವಜನ ಮೇಳಗಳು ಕಳಾಹೀನವಾಗುತ್ತಿವೆ ಎಂದು ಶಾಸಕ ಪರಣ್ಣ ಮುನವಳ್ಳಿ ವಿಷಾದ ವ್ಯಕ್ತಪಡಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತಾಲ್ಲೂಕಿನ ಸಂಗಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಯುವಕರಲ್ಲಿ ಅದರಲ್ಲೂ ಗ್ರಾಮೀಣ ಕ್ರೀಡೆಗಳಿಗೆ ವೇದಿಕೆ ಕಲ್ಪಿಸಬಲ್ಲ ಇಂಥ ಮೇಳ ಯಶಸ್ವಿಯಾಗಬೇಕಾದರೆ ಮುಂದಿನ ದಿನದಲ್ಲಿ ಅಧಿಕಾರಿಗಳು ಹೆಚ್ಚು ಚುರುಕಿನಿಂದ ಕಾರ್ಯ ನಿರ್ವಹಿಸಬೇಕು” ಎಂದು ಸೂಚನೆ ನೀಡಿದರು.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಸರ್ಕಾರದ ಗಮನ ಸೆಳೆದು ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಸಂಗಾಪುರ ಗ್ರಾಮದಲ್ಲಿ ಪ್ರೌಢಶಾಲೆ ಆರಂಭವಾಗಲಿದೆ ಎಂದರು.

ಆನೆಗೊಂದಿ ಕ್ಷೇತ್ರದ ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ಮಾತನಾಡಿ, ‘ರಾಜ್ಯ, ವಲಯಮಟ್ಟದಲ್ಲಿ ಸಾಧನೆ ಮಾಡಿದ ತಂಡಗಳು ತಾಲ್ಲೂಕಿನಲ್ಲಿ ಸಾಕಷ್ಟಿವೆ. ಆದರೆ ಬಿಡುಗಡೆಯಾಗುವ ರೂ, 10-20 ಸಾವಿರ ಹಣ ವ್ಯರ್ಥಮಾಡಿ ಕಾಟಾಚಾರಕ್ಕೆ ಮೇಳ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

ಪ್ರಾಸ್ತಾವಿಕ ಮಾತನಾಡಿದ ಇಲಾಖೆಯ ತಾಲ್ಲೂಕು ಅಧಿಕಾರಿ ತಿಪ್ಪಯ್ಯ ಹಿರೇಮಠ ಅವರು, ‘ಮಾರ್ಚ್ ತಿಂಗಳ ್ಲಒಳಗಾಗಿ  ಯುವಜನ ಮೇಳ ಮುಗಿಸಬೇಕೆಂಬ ಷರತ್ತಿದೆ. ಜೊತೆಗೆ ಆನೆಗೊಂದಿ ಉತ್ಸವಕ್ಕೆ ಗಮನ ಕೇಂದ್ರೀಕರಿಸಬೇಕಿದ್ದರಿಂದ ತರಾತುರಿಯಲ್ಲಿ ಮೇವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.