ADVERTISEMENT

ರಸಗೊಬ್ಬರ ಬೆಲೆ ಏರಿಕೆಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಮಧುಗಿರಿ: ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಸಿರುವುದನ್ನು ವಿರೋಧಿಸಿ ತಾಲ್ಲೂಕು ಬಿಜೆಪಿ ಘಟಕವು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿತು.

ಮನವಿ ಸಲ್ಲಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಪಾಂಡುರಂಗಾರೆಡ್ಡಿ, ದೇಶದ ಎಲ್ಲೆಡೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರಕ್ಕೆ ರೈತರ ಧ್ವನಿ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ವರ್ಷದಿಂದ ವರ್ಷಕ್ಕೆ ರಸಗೊಬ್ಬರ ಬೆಲೆ ಹೆಚ್ಚಿಸುತ್ತಿರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಅಸಾಧ್ಯವಾಗಿದೆ. ಹಳ್ಳಿಗಳಲ್ಲಿ ಬೇಸಾಯ ನಂಬಿರುವ ರೈತರು ಇದೇ ಪರಿಸ್ಥಿತಿ ಮುಂದುವರೆದರೆ ಗ್ರಾಮ ತೊರೆದು ಗುಳೇ ಹೋಗುವ ದಿನಗಳು ದೂರ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬೇಸಾಯ ದುಬಾರಿ ಎನಿಸಿ ರೈತರು ಕೃಷಿಯಿಂದ ದೂರ ಉಳಿದರೆ, ದೇಶ ಆಹಾರ ಅಭಾವ ಎದುರಿಸಬೇಕಾಗುತ್ತದೆ. ಕೇಂದ್ರ ಎಲ್ಲ ನಿಟ್ಟಿನಲ್ಲೂ ಆಲೋಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಬಿ.ಎನ್.ಲಕ್ಷ್ಮೀಪತಿ, ಎಂ.ರಂಗಪ್ಪ, ನಾಗಾರೆಡ್ಡಿ, ಪದ್ಮಣ್ಣ, ರಂಗಶಾಮಯ್ಯ, ನರಸಿಂಹಮೂರ್ತಿ, ಲಕ್ಷ್ಮೀನಾರಾಯಣ, ಡಾ.ಶ್ರೀನಿವಾಸಮೂರ್ತಿ, ಪುರಸಭಾ ಸದಸ್ಯ ಎಂ.ಸುರೇಶ್, ಬಿ.ಪಿ.ನಾರಾಯಣ್ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.