ADVERTISEMENT

ರಾಣಿ ಚನ್ನಮ್ಮ ವಿಜಯೋತ್ಸವ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಧಾರವಾಡ: “ಪಂಚಮಸಾಲಿ ಸಮಾಜದ ಬುದ್ಧಿವಂತ ಜನರು ತಮ್ಮ ಸಮಾಜದಲ್ಲಿರುವ ಪ್ರತಿಭಾವಂತ ಹಾಗೂ ಪ್ರಗತಿಪರ ಚಿಂತನೆ ಮಾಡುವ ಜನರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ” ಎಂದು ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.

ಕಿತ್ತೂರು ರಾಣಿ ಚನ್ನಮ್ಮಳ 189ನೇ ವಿಜಯೋತ್ಸವ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಲ್ಲಿನ ವೀರಶೈವ, ಲಿಂಗವಂತ ಹಾಗೂ ಪಂಚಮಸಾಲಿ ಸಂಘದ ವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವೀರಶೈವ, ಲಿಂಗಾಯತ ಹಾಗೂ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷ ಬಸವರಾಜ ದಿಂಡೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ಪ್ರವರ್ಗ 3-ಬಿಯಲ್ಲಿ ಬರುವ ಪಂಚಮಸಾಲಿ ಹಾಗೂ ಅದರ ಉಪ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಇದು ಆಶಾದಾಯಕ ಬೆಳವಣಿಗೆ” ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ, ಕಲ್ಲಪ್ಪ ಯಲಿವಾಳ, ವಿಜಯೇಂದ್ರ ಪಾಟೀಲ, ಮಂಜುನಾಥ ಕುಣ್ಣೂರ, ಎಸ್.ಎಚ್. ಪಾಟೀಲ, ಡಾ.ಮಹೇಶ ಹೊರಕೇರಿ, ದಾಕ್ಷಾಯಿಣಿ ಬಸವರಾಜ, ರೇಣುಕಾ ಇಳಕಲ್ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸನ್ಮಾನ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪಂಚಮಸಾಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೀರಣ್ಣ ವಡ್ಡೀನ ನಿರೂಪಿಸಿದರು. ಬಿ.ಎಂ.ಮರಿತಮ್ಮಣ್ಣವರ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.