ADVERTISEMENT

ರಾತ್ರಿ ಗಸ್ತಿಗೆ ಹೆಚ್ಚಿನ ಪೊಲೀಸ್: ಎಸ್ಪಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 18:50 IST
Last Updated 22 ಫೆಬ್ರುವರಿ 2011, 18:50 IST

ಮಡಿಕೇರಿ: ಐತಿಹಾಸಿಕ ರಾಜರ ಗದ್ದಿಗೆ ಬಾಗಿಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಹಾಗೂ ಬುಧವಾರ ರಾತ್ರಿ ಗಸ್ತಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ ತಿಳಿಸಿದ್ದಾರೆ.

ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಬೆಂಕಿಗಾಹುತಿಯಾಗಿರುವ ರಾಜರ ಗದ್ದಿಗೆ ಬಾಗಿಲನ್ನು ಪರಿಶೀಲಿಸಿದ ನಂತರ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಫೆ. 24ರಂದು ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವ ಭದ್ರತೆಗಾಗಿ ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅಲ್ಲದೆ, ಮಂಗಳವಾರ ನಡೆದ ಕಿಡಿಗೇಡಿಗಳ ಕೃತ್ಯದ ಹಿನ್ನೆಲೆಯಲ್ಲಿ ಎರಡು ದಿನ ರಾತ್ರಿ ವೇಳೆ ಗಸ್ತಿಗಾಗಿ ಇನ್ನಷ್ಟು ಹೆಚ್ಚಿನ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದರು.

ಮಡಿಕೇರಿ ರಾಜರ ಗದ್ದಿಗೆಯ ಬಾಗಿಲು ಮುರಿಯಲು ಕಿಡಿಗೇಡಿಗಳು ಫೆ. 19ರಂದು ವಿಫಲ ಯತ್ನ ನಡೆಸಿರುವ ಕುರಿತು ಇಲಾಖೆಗೆ ದೂರು ಬಂದಿದೆ ಎಂದು ಹೇಳಿದರು.

ಈ ಮಧ್ಯೆ, ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್. ಗೋಪಾಲ್ ಬುಧವಾರ ನಗರಕ್ಕೆ ಆಗಮಿಸಿ, ಬೆಂಕಿಗೆ ಆಹುತಿಯಾದಂತಹ ರಾಜರ ಗದ್ದಿಗೆಯ ಪರಿಶೀಲನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.