ADVERTISEMENT

ರಾಸಲೀಲೆ ಪ್ರಕರಣ: ಸಿಬಿಐಗೆ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ರಾಮನಗರ: `ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಸಿಐಡಿ ನಡೆಸುತ್ತಿರುವ ತನಿಖೆ ನಿಷ್ಪಕ್ಷತವಾಗಿಲ್ಲ. ಹಾಗಾಗಿ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು~ ಎಂದು ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಆಗ್ರಹಿಸಿದರು.

ಬಿಡದಿ ಬಳಿಯ ಧ್ಯಾನಪೀಠ ಆಶ್ರಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಇಲ್ಲಿಯವರೆಗೆ ಸಿಐಡಿ ನನ್ನ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ಹೆಚ್ಚುವರಿ ದೋಷಾರೋಪ ಪಟ್ಟಿಯಿಂದ ಹಿಡಿದು ಎಲ್ಲ ಬಗೆಯ ಆರೋಪಗಳು ಸುಳ್ಳಿನ ಕಂತೆಯಾಗಿವೆ. ಹಾಗಾಗಿ ಸಿಐಡಿ ನಡೆಸುವ ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ ಎಂಬ ನಂಬಿಕೆ ಇಲ್ಲ. ಸತ್ಯಾಂಶ ಗೊತ್ತಾಗಬೇಕು ಎಂದರೆ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಿ~ ಎಂದು  ಒತ್ತಾಯಿಸಿದರು.

`ಸಿಐಡಿ ಮತ್ತು ಮಾಧ್ಯಮದವರು ನನ್ನ ಜೀವನದ ಜತೆ ಚಲ್ಲಾಟವಾಡುತ್ತಿದ್ದಾರೆ. ಬೇಕಾದಾಗ ನನ್ನನ್ನು ಬಳಸಿಕೊಂಡು ಬೇಡವಾದಾಗ ಬಿಸಾಡಲು ನಾನೇನು ಆಟದ ಗೊಂಬೆಯಲ್ಲ~ ಎಂದ ಅವರು `ದೇಶದಲ್ಲಿ ನನಗೂ ಗೌರವಯುತವಾಗಿ ಜೀವಿಸುವ ಹಕ್ಕಿದೆ. ಆದರೆ ಅದಕ್ಕೆ ಸಿಐಡಿ ಮತ್ತು ಮಾಧ್ಯಮಗಳು ಬಿಡುತ್ತಿಲ್ಲ~ ಎಂದು ಆರೋಪಿಸಿದರು.

`ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಹೇಳಿಕೆ ನೀಡಿದರೆ ಅದು ಪಕ್ಷಪಾತದ ವಿವರಣೆ ಆಗುತ್ತದೆ. ಆದರೆ ಸಿಐಡಿ ಪೊಲೀಸರು ಇದನ್ನು ಮರೆತಿದ್ದಾರೆ. ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮೊದಲೇ ಪೊಲೀಸರು ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ ನನ್ನ ತೇಜೋವಧೆಗೆ ಇಂಬು ನೀಡಿದ್ದಾರೆ~ ಎಂದು ಅವರು ದೂರಿದರು.

`ಸಿಐಡಿ ಹಾಕಿರುವ ದೋಷಾರೋಪ ಪಟ್ಟಿಯಲ್ಲಿನ ಎಲ್ಲ ವಿಷಯಗಳಲ್ಲಿಯೂ ನಾನು ನಿರಪರಾಧಿ ಎಂದು ಸಾಬೀತು ಪಡಿಸಬಲ್ಲ ಬಲಿಷ್ಠವಾದ ದಾಖಲೆಗಳು ನನ್ನ ಬಳಿ ಇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಸಿಐಡಿ ಪೊಲೀಸರು ಪ್ರತಿ ಮಾಹಿತಿಯನ್ನು ಮಾಧ್ಯಮದವರ ಜತೆ ಹಂಚಿಕೊಳ್ಳುತ್ತಿದ್ದಾರೆ~ ಎಂದು ಟೀಕಿಸಿದರು. 

`ನನ್ನ ಬಳಿ ಇರುವ ದಾಖಲೆಗಳನ್ನು ಮಾಧ್ಯಮದಲ್ಲಿ ಬಿತ್ತರಿಸಿ ನಿರಪರಾಧಿತನವನ್ನು ಪ್ರತಿಪಾದಿಸಲು ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡುತ್ತೇನೆ. ಅದಕ್ಕೆ ಅವಕಾಶ ನೀಡದಿದ್ದರೆ, ನಿರಾಧಾರವಾದ ವರದಿಗಳನ್ನು ಬಿತ್ತರಿಸದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಲು ಕೋರುತ್ತೇನೆ~ ಎಂದರು.

ವೈದ್ಯಕೀಯ ಪರೀಕ್ಷೆಗೆ ಸಿದ್ಧ: `ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂತಹ ವೈದ್ಯಕೀಯ ಪರೀಕ್ಷೆ ನಡೆಸಿದರೂ ಎದುರಿಸಲು ನಾನು ಸಿದ್ಧನಿದ್ದೇನೆ. ಈ ವಿಷಯವನ್ನು ಮೊದಲೇ ಸಿಐಡಿ ಪೊಲೀಸರಿಗೆ ತಿಳಿಸಿದ್ದೆ. ಆದರೆ ಅವರು ಅದನ್ನು ಮುಚ್ಚಿಟ್ಟರು. ಬದಲಿಗೆ ನಾನು ವೈದ್ಯಕೀಯ ಚಿಕಿತ್ಸೆಗೆ ಸಿದ್ಧ ಇಲ್ಲ ಎಂಬಂತೆ ಬಿಂಬಿಸಿದರು~ ಎಂದು ಆರೋಪಿಸಿದರು.

ತಮಿಳು ಮಾಧ್ಯಮದ ಪಿತೂರಿ: `ಚೆನ್ನೈನಲ್ಲಿರುವ ಆಶ್ರಮದ ನಿವೇಶನ ಕಬಳಿಸಲು ತಮಿಳು ವಿದ್ಯುನ್ಮಾನ ಮಾಧ್ಯಮವೊಂದು ಪ್ರಯತ್ನಿಸಿತ್ತು. ಅದಕ್ಕೆ ಅವಕಾಶ ನೀಡದಿದ್ದಾಗ, ಆ ಮಾಧ್ಯಮ ನನ್ನ ವಿರುದ್ಧ ಈ ರೀತಿ ತಿರುಗಿ ಬಿದ್ದು ಇಂತಹ ಪಿತೂರಿ ನಡೆಸಿದೆ. ಆ ಮಾಧ್ಯಮವೂ ಸೇರಿದಂತೆ ಕೆಲ ವಿದ್ಯುನ್ಮಾನ ಮಾಧ್ಯಮಗಳು ನನ್ನ ಮತ್ತು ನನ್ನ ಸಂಸ್ಥೆಯ ಮೇಲೆ ಸಾಕಷ್ಟು ಅಪಪ್ರಚಾರ ನಡೆಸಿ, ತೇಜೋವಧೆ ಮಾಡಿವೆ. ಇದರಿಂದ ನನಗೆ ಮತ್ತು ಸಂಸ್ಥೆಗೆ ದೊಡ್ಡ ಆಘಾತವಾಗಿದ್ದು, ತುಂಬಲಾರದ ನಷ್ಟವಾಗಿದೆ. ಹಾಗಾಗಿ ಕೆಲ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ ಕೈಗೊಂಡಿದ್ದೇನೆ~ ಎಂದು ಅವರು ಹೇಳಿದರು.

ವ್ಯತಿರಿಕ್ತ ಹೇಳಿಕೆ: `ಇಡೀ ಪ್ರಕರಣದ ಪ್ರಮುಖ ಸಾಕ್ಷಿ ಎನ್ನಲಾದ ಲೆನಿನ್ ಮೊದಲು ನೀಡಿದ್ದ ಹೇಳಿಕೆಗೂ, ಇತ್ತೀಚೆಗೆ ಚೆನ್ನೈ ಪೊಲೀಸರಿಗೆ ನೀಡಿರುವ ಹೇಳಿಕೆಗೂ ಸಾಮ್ಯತೆ ಇಲ್ಲ. ಮಾಧ್ಯಮದವರಿಗೆ ರಾಸಲೀಲೆಯ ಸಿ.ಡಿಗಳನ್ನು ತಾನೇ ನೀಡಿದ್ದು ಎಂದು 2010ರ ಮಾರ್ಚ್‌ನಲ್ಲಿ ತಮಿಳು ಚಾನೆಲ್ ಸಂದರ್ಶನದಲ್ಲಿ ಲೆನಿನ್ ಹೇಳಿದ್ದ. ಆದರೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಆತ 2010ರ ಮಾರ್ಚ್ 4ರಂದು ಸಿ.ಡಿಯನ್ನು ಪೊಲೀಸರಿಗೆ ನೀಡಿದೆನೇ ಹೊರತು ಮಾಧ್ಯಮಗಳಿಗೆ ನೀಡಿಲ್ಲ ಎಂದು ತಿಳಿಸಿದ್ದಾನೆ. ಮಾರ್ಚ್ 2ರಂದು ಎಲ್ಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿ.ಡಿ ಪ್ರಸಾರವಾಗಿ ನನ್ನ ತೇಜೋವಧೆಯಾಗಿತ್ತು~ ಎಂದು ಬೇಸರ ವ್ಯಕ್ತಪಡಿಸಿದ ನಿತ್ಯಾನಂದ, ಸಿಬಿಐ ತನಿಖೆ ನಡೆದರೆ ನಿಜಾಂಶ ಹೊರಬರುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.