ದಾವಣಗೆರೆ: ಚಿತ್ರದುರ್ಗದಲ್ಲಿ ಮಾರ್ಚ್ 17ರಂದು ಗುಂಪೊಂದು ನಡೆಸಿರುವ ಸಭೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಸಿಂಧು ಎಂದು ಘೋಷಿಸಿದ್ದರೂ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪದಾಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದ್ದು, ಅವರು ಪುನಃ ರೈತ ಸಂಘಕ್ಕೆ ಮರಳಲು ರೈತ ಸಂಘ 15 ದಿನಗಳ ಕಾಲಾವಕಾಶ ನೀಡುತ್ತದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಫೆ. 23ರಂದು ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ಪುಟ್ಟಣ್ಣಯ್ಯ ಅವರು, ಹಸಿರು ಶಾಲಿನ ಮೇಲೆ ಆಣೆ ಮಾಡಿ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷರು ಎಂದು ಸಹಮತ ಸೂಚಿಸಿದ್ದರು. ಅಂದು ಯಾರ ಮೇಲೂ ಒತ್ತಡ ಹೇರಿ ತೀರ್ಮಾನ ತೆಗೆದುಕೊಳ್ಳಲಿಲ್ಲ.
ಎಲ್ಲರ ಅಭಿಪ್ರಾಯದಂತೆ ನಿರ್ಣಯಕ್ಕೆ ಬರಲಾಗಿತ್ತು. ಈ ಹೇಳಿಕೆಗೆ ವಿರುದ್ಧವಾಗಿ ಪುಟ್ಟಣ್ಣಯ್ಯ ಮತ್ತಿತರರು ನಡೆದುಕೊಳ್ಳದೇ ನಿಗದಿತ ಕಾಲಾವಕಾಶದ ಒಳಗೆ ರೈತ ಸಂಘಕ್ಕೆ ಮರಳಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕರೆ ನೀಡಿದರು.
ರೈತಸಂಘ ಮತ್ತು ಹಸಿರು ಸೇನೆಯ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನದವರು ರೈತ ಸಂಘ ಮತ್ತು ನಂಜುಂಡಸ್ವಾಮಿ ಅವರ ತತ್ವ ಸಿದ್ಧಾಂತಗಳ ವಿರುದ್ಧ ನಡೆಯುತ್ತಿದ್ದಾರೆ. ಭ್ರಷ್ಟ ರಾಜಕಾರಣಿಗಳ ಜತೆ ಸೇರಿ ಎಂಡಿಎನ್ ಹುಟ್ಟುಹಬ್ಬ ದಿನ ಸಭೆ ಕರೆದು ಪ್ರತಿಷ್ಠಾನಕ್ಕೆ ನಿವೇಶನ, ಹಣ, ಪ್ರಶಸ್ತಿಗಳನ್ನು ಬೇಡಿದ್ದಾರೆ.
ಇದು ನಂಜುಂಡಸ್ವಾಮಿ ವಿಚಾರಗಳನ್ನು ಮಣ್ಣುಪಾಲು ಮಾಡಿದಂತೆ. ಅಲ್ಲದೇ, ರೈತ ಚಳವಳಿ ದಿಕ್ಕನ್ನೇ ತಪ್ಪಿಸುತ್ತಿದ್ದಾರೆ. ಇಂಥ ಭ್ರಷ್ಟ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು ಅಗತ್ಯವಿದೆ ಎಂದು ಒತ್ತಾಯಿಸಿದರು.
ರೈತ ಮುಖಂಡ ಕಡಿದಾಳ್ ಶಾಮಣ್ಣ ಮಾತನಾಡಿ, ಪುಟ್ಟಣ್ಣಯ್ಯ ಅವರ ಮುಗ್ಧತೆ ಮತ್ತು ಆದರ್ಶದ ನಿರ್ಣಯಗಳನ್ನು ಚಿವುಟಿ ಹಾಕಿ ಬೇರೆ ರೀತಿ ನಡೆಸಿಕೊಳ್ಳುತ್ತಿದ್ದಾರೆ.
ಚಾಮರಸ ಪಾಟೀಲ್ ಅವರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಡಾ.ವೆಂಕಟರೆಡ್ಡಿ ತಿಳಿಸಿದ್ದಾರೆ. ಸಂಘದಲ್ಲಿ ಕೆಲವರು ಪ್ರಲೋಭನೆಗೆ ಒಳಗಾಗಿ ಏಕೆ ಈ ರೀತಿ ವರ್ತಿಸುತ್ತಿದ್ದಾರೋ ಎಂದು ತಿಳಿಯದು. ಯಾವುದೇ ಸಮಸ್ಯೆ ಬಗೆಹರಿಸಲು ತಾಳ್ಮೆ ಇಲ್ಲದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಮಹೇಶ್ ತರೀಕೆರೆ, ರಮೇಶ್, ಈಚಘಟ್ಟ ಈಶ್ವರಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.