ADVERTISEMENT

ವಾಲ್ಮೀಕಿ ಜಯಂತಿ: ಮನಸೂರೆಗೊಂಡ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST
ವಾಲ್ಮೀಕಿ ಜಯಂತಿ: ಮನಸೂರೆಗೊಂಡ ಮೆರವಣಿಗೆ
ವಾಲ್ಮೀಕಿ ಜಯಂತಿ: ಮನಸೂರೆಗೊಂಡ ಮೆರವಣಿಗೆ   

ದಾವಣಗೆರೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ಜನಮನ ಸೂರೆಗೊಂಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ಆಕರ್ಷಕವಾಗಿತ್ತು.

ಬೆಳಿಗ್ಗೆ 8ಕ್ಕೆ ನಗರದ ಹೊಂಡದ ವೃತ್ತದ ಬಳಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ಗುಂಡಿ ವೃತ್ತ ತಲುಪಿತು.

ಮೆರವಣಿಯಲ್ಲಿ ಡೊಳ್ಳು, ತಮಟೆ, ಕಾವಡಿ ನೃತ್ಯ, ಬೇಡರಪಡೆ ನೃತ್ಯ, ಕೋಲಾಟ, ಗೊಂಬೆ ಕುಣಿತ, ವೀರಗಾಸೆ, ಕೀಲುಕುದುರೆ ಇತ್ಯಾದಿ ಜಾನಪದ ಕಲಾತಂಡಗಳು ಹಾಗೂ ವಿವಿಧ ವೇಷಭೂಷಣ ಧರಿಸಿದ ಕಲಾವಿದರು ಪ್ರದರ್ಶನ ನೀಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ವಾಲ್ಮೀಕಿ, ಬೇಡರ ಕಣ್ಣಪ್ಪ, ಏಕಲವ್ಯ, ಮದಕರಿ ನಾಯಕ ಸಮಾಜದ ಮಹಾನ್ ಪುರುಷರನ್ನು ಸ್ಮರಿಸಿದರು.

ಶತಮಾನಗಳ ಕಾಲ ಸಮಾಜವನ್ನು ಕಾಯುತ್ತಾ ಬಂದ ನಾಯಕ ಸಮಾಜಕ್ಕೆ ಇಂದಿಗೂ ದೇಶ ಆಳಲು ಸಾಧ್ಯವಾಗಿಲ್ಲ. ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರೆತಿಲ್ಲ. ಮೀಸಲಾತಿ, ಮೀಸಲು ಸೌಲಭ್ಯಗಳು ಜನರಿಗೆ ಸೂಕ್ತವಾಗಿ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದ ಮೀಸಲು ಸೌಲಭ್ಯ ಪಡೆದು ನೌಕರಿ ಪಡೆದ ಅಧಿಕಾರಿಗಳು ವರ್ಷದಲ್ಲಿ ಕನಿಷ್ಠ ಒಂದು ತಿಂಗಳು ಲಂಚ ಪಡೆಯದೇ ಕೆಲಸ ಮಾಡಿ, ಆ ಮೂಲಕ ಮಹರ್ಷಿಗೆ ಗೌರವ ನೀಡಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.