ADVERTISEMENT

ವಿಜೃಂಭಣೆಯಿಂದ ನಡೆದ ಕುದುರೆ ವಾಹನೋತ್ಸವ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಚನ್ನರಾಯಪಟ್ಟಣ: ಬಾಗೂರು ಗ್ರಾಮ ದೇವತೆ ಸಂತೇಕಾಳೇಶ್ವರಿ ದೇವಿಯ ರಥೋತ್ಸವದ ಅಂಗವಾಗಿ ಕುದುರೆ ವಾಹನೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಹೋಬಳಿ ಕೇಂದ್ರದಲ್ಲಿರುವ ಗ್ರಾಮದೇವತೆಗೆ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕುದುರೆ ವಾಹನೋತ್ಸವಕ್ಕೆ ಚಾಲನೆ ನೀಡಲಾಯಿತು.

ಕುದುರೆ ವಾಹನೋತ್ಸವ ಸಾಗುವ ದಾರಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಇಟ್ಟು ಬರ ಮಾಡಿಕೊಳ್ಳಲಾಯಿತು. ವಾಹನೋತ್ಸವ ಹೊತ್ತ ಯುವಕರು ಮುಖಕ್ಕೆ ಬಣ್ಣ ಬಳಿದುಕೊಂಡು ಹರ್ಷೋದ್ಗಾರ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು.

ಕುದುರೆ ವಾಹನೋತ್ಸವ ಹೊತ್ತ ಭಕ್ತರ ಕಾಲನ್ನು ಮಹಿಳೆಯರು ನೀರಿನಿಂದ ತೊಳೆದು, ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ದೇವರಿಗೆ ಹೊಸ ಸೀರೆಗಳನ್ನು ಸಲ್ಲಿಸಿದರು. ಸಂಜೆವರೆಗೆ ನಡೆದ ಉತ್ಸವ ನಂತರ ಸ್ವಸ್ಥಾನಕ್ಕೆ ಮರಳಿತು.

ಇದಕ್ಕೂ ಮುನ್ನಾ ಭಾನುವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ನಂತರ ಅಲಂಕೃತ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ ರಥೋತ್ಸವ ನಡೆಯಿತು. ಸುತ್ತಲಿನ ದ್ಯಾವನೂರು, ಕೂರದಹಳ್ಳಿ. ಕುಂಬಾರಹಳ್ಳಿ, ಹೊನ್ನೇನಹಳ್ಳಿ, ಚೌಡೇನಹಳ್ಳಿ, ಮರುವನಹಳ್ಳಿ ಗ್ರಾಮಸ್ಥರು ಊರುಗಳಲ್ಲಿ ಪೂಜೆ ಸಲ್ಲಿಸಿದ ಶನಿವಾರ ಸಂಜೆ ರಥಗಳು ಬಾಗೂರು ಗ್ರಾಮಕ್ಕೆ ಆಗಮಿಸಿದ್ದವು. ದಾರಿಯಲ್ಲಿ ಮಧ್ಯದಲ್ಲಿ ಸಿಗುವ ಹಳ್ಳಿಗಳಲ್ಲಿ ಜನತೆ ಪೂಜೆ ಸಲ್ಲಿಸಿದರು. ಭಾನುವಾರ ಬೆಳಿಗ್ಗೆ ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಹಣ್ಣು, ಜವನ ಎಸೆದು ಭಕ್ತಿಯಿಂದ ನಮಿಸಿದರು.

ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ಶನಿವಾರ ಸಿಡಿ ಉತ್ಸವ ಜರುಗಿತು. ಸುತ್ತಲಿನ ಹಳ್ಳಿಗಳಲ್ಲಿ ಸ್ನೇಹಿತರು, ನೆಂಟರಿಷ್ಟರೊಂದಿಗೆ ಮಾಂಸದೂಟ ಸವಿಯುವುದು ಜಾತ್ರೆಯ ವಿಶೇಷ. ಸೋಮವಾರ ಸಂಜೆ ದೇವಿಗೆ ಪೂಜೆ ಸಲ್ಲಿಸಿದ ನಂತರ ರಥಗಳು ಪುನಃ ಗ್ರಾಮಕ್ಕೆ ತೆರಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.