ADVERTISEMENT

ವಿಜ್ಞಾನದಿಂದ ದೇಶದ ಪ್ರಗತಿ ಸಾಧ್ಯ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಕನಕಪುರ:  ವೈಜ್ಞಾನಿಕ ಪ್ರಗತಿಯಿಂದ ಮಾತ್ರ ಒಂದು ದೇಶ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ದೇಗುಲಮಠ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ಇಲ್ಲಿ ಅಭಿಪ್ರಾಯಪಟ್ಟರು.
ಪಟ್ಟಣದ ದೇಗುಲಮಠದ ನಿರ್ವಾಣಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ಮೇಳದಲ್ಲಿ ಅವರು ಮಾತನಾಡಿದರು.
 

ಸುನಾಮಿ ಹಾಗೂ ಭೂಕಂಪಕ್ಕೆ ಸಿಲುಕಿದ ಜಪಾನ್‌ನ ಜನತೆ ತತ್ತರಿಸಿ ಹೋಗಿದ್ದಾರೆ. ಆದರೂ ಸಹ ಅವರು ಸಾಧಿಸಿರುವ ಅದ್ಬುತ ವೈಜ್ಞಾನಿಕ ಪ್ರಗತಿಯಿಂದಾಗಿ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ಮನೋಭಾವ ಪ್ರದರ್ಶಿಸುತ್ತಿದ್ದಾರೆ ಎಂದು  ತಿಳಿಸಿದರು.

ಭಾರತ ವೈಜ್ಞಾನಿಕವಾಗಿ ಇನ್ನೂ ಪ್ರಗತಿ ಕಾಣಬೇಕಿದೆ. ಬಡತನ ನಿರ್ಮೂಲನೆ, ನಿರುದ್ಯೋಗ ಸಮಸ್ಯೆಯಂತಹ ಸಾಮಾಜಿಕ ಪಿಡುಗುಗಳು ದೂರವಾಗಿ ಸಮಾಜದಲ್ಲಿ ಸಮಾನತೆ ನಿರ್ಮಾಣವಾಗಬೇಕಿದೆ. ವೈಜ್ಞಾನಿಕವಾಗಿ ಮೇಲುಗೈ ಸಾಧಿಸಲು  ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಈ ನಿಟ್ಟಿನಲ್ಲಿ ಇಂದು ನಡೆಯುತ್ತಿರುವ ವಿಜ್ಞಾನ ಮೇಳ ಪೂರಕವಾಗಿದೆ.

ಎರಡು ದಿನ ನಡೆಯುವ ವಿಜ್ಞಾನ ಕಮ್ಮಟದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ತಾಲ್ಲೂಕು ಪಂಚಾಯಿತಿ ಇಒ ಜೆ.ಜಿ.ನಾಯಕ್, ಬಿಇಒ ಎಚ್.ಶಿವರಾಮೇಗೌಡ, ತಹಶೀಲ್ದಾರ್ ಪ್ರಜ್ಞಾ, ಶಿಕ್ಷಣ ಸಂಯೋಜಕ ಶಿವರಾಜು, ಮುಖ್ಯ ಶಿಕ್ಷಕ ಸಿ.ಪುಟ್ಟಸ್ವಾಮಿ, ವೈ.ಎನ್.ಪರಮಶಿವಯ್ಯ, ವರದರಾಜು ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT