ADVERTISEMENT

ವಿದ್ಯುತ್ ದುರ್ಬಳಕೆ ತಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:12 IST
Last Updated 25 ಜೂನ್ 2013, 10:12 IST

ಔರಾದ್: ವಿದ್ಯುತ್ ದುರ್ಬಳಕೆ ಮತ್ತು ಅನಗತ್ಯ ಪೋಲಾಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ತಾಪಂ. ಆಶ್ರಯದಲ್ಲಿ ಸೋಮವಾರ ಇಲ್ಲಿಯ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ ಸಾವಯವ ಕೃಷಿ ಕುರಿತ ಕಾರ್ಯಾಗಾರದಲ್ಲಿ ಬಹುತೇಕ ರೈತರು ಈ ಮೇಲಿನಂತೆ ಅಭಿಪ್ರಾಯ ಮಂಡಿಸಿದರು. ಹಳ್ಳಿಗಳಲ್ಲಿ ಹಗಲಲ್ಲಿ ದೀಪ ಉರಿಯುತ್ತಿರುತ್ತವೆ. ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ರಂಗದಲ್ಲಿ ವಿದ್ಯುತ್ ಬೇಕಾಬಿಟ್ಟೆ ಪೋಲು ಮಾಡಲಾಗುತ್ತದೆ. ಸಾಕಷ್ಟು ಕಡೆ ದುರ್ಬಳಕೆಯೂ ಆಗುತ್ತಿರುವುದರಿಂದ ವಿದ್ಯುತ್ ಕೊರತೆಯಾಗಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಅದರ ಹೊರೆಯಾಗುತ್ತಿದೆ ಎಂದು ರೈತ ವೀರಭೂಷಣ ನಂದಗಾವೆ ಕಳವಳ ವ್ಯಕ್ತಪಡಿಸಿದರು.

ದೇಶಿ ಬೀಜ ಮತ್ತು ಗೊಬ್ಬರ ಉಪಯೋಗಿಸಿದರೆ ವಿಷರಹಿತ ಆಹಾರ ತಯಾರಿಸಬಹುದಾಗಿದೆ. ರಸಗೊಬ್ಬರ ಮತ್ತು ಕ್ರಿಮಿನಾಶಕ ಉಪಯೋಗಿಸಿ ಬೆಳೆಸಿದ ಆಹಾರ ವಿಷಪೂರಿತವಾಗುತ್ತದೆ ಎಂದು ರೈತ ಸತ್ಯವಾನ ಪಾಟೀಲ ಹೇಳಿದರು. ಅಧ್ಯಕ್ಷತೆ ವಹಿಸಿದ ತಾಪಂ. ಮುಖ್ಯಾಧಿಕಾರಿ ಗದಗೆಪ್ಪ, ರೈತರಿಗೆ ಸಾವಯವ ಕೃಷಿ ಮಹತ್ವ ತಿಳಿಯಲೆಂದು ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಿಂದ ಒಂದಿಷ್ಟು ಕಲಿತುಕೊಂಡು ತಮ್ಮ ತಮ್ಮ ಹೊಲದಲ್ಲಿ ಅಳವಡಿಸಿಕೊಳ್ಳಲು ರೈತರಿಗೆ ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ, ಭಾರತೀಯರದ್ದು ನೈಸರ್ಗಿಕ ಕೃಷಿಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ರಸಗೊಬ್ಬರ ಬಳಕೆಯಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಹೇಳಿದರು. ಹಂತ ಹಂತವಾಗಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ತಾಪಂ. ಅಧ್ಯಕ್ಷ ರಾಜಕುಮಾರ ಪಾಟೀಲ ಕಾರ್ಯಾಗಾರ ಉದ್ಘಾಟಿಸಿದರು. ಎಪಿಎಂಸಿ ಉಪಾಧ್ಯಕ್ಷ ಗೋವಿಂದ ಇಂಗಳೆ, ತಾಪಂ. ಸದಸ್ಯ ವಿನಾಯಕ ಜಗದಾಳೆ, ಶ್ರೀಮಂತ ಬಿರಾದಾರ, ಶೈಲೇಂದ್ರ ಕುಲಕರ್ಣಿ, ಮಧುಕರರಾವ ಇದ್ದರು. ಉಮೇಶ ಪಾಟೀಲ ಸ್ವಾಗತಿಸಿದರು. ತಾಲ್ಲೂಕಿನ 200 ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.