ADVERTISEMENT

ವೇತನ ತಾರತಮ್ಯ: ಉಪನ್ಯಾಸಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 19:30 IST
Last Updated 8 ಏಪ್ರಿಲ್ 2011, 19:30 IST

ಶಿವಮೊಗ್ಗ:ವೇತನ ತಾರತಮ್ಯ ಹೋಗಲಾಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ನೌಕರರ ಒಕ್ಕೂಟದ ನೇತೃತ್ವದಲ್ಲಿ ಉಪನ್ಯಾಸಕರು ಮೌಲ್ಯಮಾಪನ ಕಾರ್ಯ ಸ್ಥಗಿತಗೊಳಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸುಮಾರು 18 ವರ್ಷಗಳಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದರೂ ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ ಎಂದು ದೂರಿದ ಪ್ರತಿಭಟನಾಕಾರರು, ಮೌಲ್ಯಮಾಪನ ಕೇಂದ್ರಗಳಲ್ಲಿ ಲೇಖನಿ ಸ್ಥಗಿತಗೊಳಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

 ಅನುದಾನಿತ ಮತ್ತು ಗುತ್ತಿಗೆ ಆಧಾರದ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಸಮಸ್ಯೆಯನ್ನು ಸಚಿವ ಸಂಪುಟದ ಮುಂದಿಟ್ಟು ಶಾಶ್ವತ ಪರಿಹಾರ ಒದಗಿಸಬೇಕು. 6ನೇ ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರದ ನೌಕರರಿಗೆ ನೀಡುವಂತೆ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು   ಒತ್ತಾಯಿಸಿದರು. ಬೇಡಿಕೆ ಈಡೇರುವವರೆಗೂ ಮೌಲ್ಯಮಾಪನ ಕಾರ್ಯ ಸ್ಥಗಿತಗೊಳಿಸಲಾಗುವುದು. ಆದರೆ, ನಿಗದಿತ ಸಮಯಕ್ಕೆ ಮೌಲ್ಯಮಾಪನ ಕಾರ್ಯ ಮತ್ತು ಫಲಿತಾಂಶ ನೀಡಲು ಸಹಾಯ ಆಗುವಂತೆ ಹೆಚ್ಚುವರಿ ಕೆಲಸ ನಿರ್ವಹಿಸುವುದಾಗಿ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಜಿ.ಎನ್. ಈಶ್ವರಮೂರ್ತಿ, ಎಸ್.ವಿ. ಗುರುರಾಜ್, ಎಸ್.ಬಿ. ಅಶೋಕ್ ಕುಮಾರ್, ಟಿ.ಎಂ. ಕುಮಾರ್ ಮತ್ತಿತರರು ನೇತೃತ್ವ     ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.