ADVERTISEMENT

ವೇತನ ತಾರತಮ್ಯ: ಪ್ರೌಢಶಾಲಾ ಸಹ ಶಿಕ್ಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ತುಮಕೂರು: 5ನೇ ವೇತನ ಆಯೋಗದಲ್ಲಿನ ಶಿಫಾರಸು ಅನುಷ್ಠಾನದಲ್ಲಿ ಆಗಿರುವ ತಾರತಮ್ಯ ನಿವಾರಣೆ ಮತ್ತು 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಶನಿವಾರ ಪ್ರೌಢಶಾಲಾ ಸಹ ಶಿಕ್ಷಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ಶಿಕ್ಷಕರು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಹಾಕಿದರು.

ಪ್ರೌಢಶಾಲಾ ಶಿಕ್ಷಕರಿಗೆ 5ನೇ ವೇತನ ಆಯೋಗದ ಶಿಫಾರಸು ಅನುಷ್ಠಾನದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಬೇಕು; 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ, ರೂ. 18,300-36,000 ವೇತನ ಶ್ರೇಣಿ ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಎಚ್.ಎಂ.ಮಲ್ಲೇಶಯ್ಯ, ಎಚ್.ಆರ್.ರೇಣುಕಯ್ಯ, ಎಸ್.ಕೃಷ್ಣಪ್ಪ, ಎಚ್.ಜಿ.ಹರೀಶ್, ಮಂಜುನಾಥ್, ಎಂ.ವೆಂಕಟರಾಮು, ಎಚ್.ಜಿ.ರಾಮಕೃಷ್ಣಪ್ಪ, ನಾರಾಯಣಪ್ಪ, ಬಿ.ರಾಮಾಂಜನೇಯ, ಗೋವಿಂದ್ ಆರ್.ಮುಜುಂದಾರ್, ಕೆ.ಟಿ.ಸಿದ್ದೇಶ್ವರ ಇನ್ನಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಪ್ರೌಢಶಾಲಾ ಸಹ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.