ದೇವನಹಳ್ಳಿ: ಪರೀಕ್ಷೆ ನಡೆಯುತ್ತಿದ್ದ ವೇಳೆ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕರಿಗೆ ಗಾಯವಾಗಿರುವ ಘಟನೆ ವಿಶ್ವನಾಥಪುರ ಪೋಲೀಸ್ ಠಾಣೆ ವ್ಯಾಪ್ತಿಯ ಬಿದಲೂರು ಗ್ರಾಮದಲ್ಲಿ ನಡೆದಿದೆ.
8 ನೇ ತರಗತಿ ವಿದ್ಯಾರ್ಥಿನಿಯರಾದ ಲಾವಣ್ಯ ಹಾಗೂ ಹೇಮಾ ಮತ್ತು ಶಿಕ್ಷಕ ಮಹದೇವ್ ಅವರು ಗಾಯಗೊಂಡವರಾಗಿದ್ದಾರೆ.
ಇವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಲಾಗಿದೆ.
ಗಾಯಗೊಂಡ ಶಿಕ್ಷಕ ಮಾತನಾಡಿ, `ಘಟನೆ ನಡೆದಾಗ ತಕ್ಷಣವೇ ಏನಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬರಲೇ ಇಲ್ಲ. ಒಮ್ಮೆಲೇ ಬಂಡೆ ಅಪ್ಪಳಿಸಿದಂತಾಯಿತು~ ಎಂದರು.
`ಎಂಟನೆ ತರಗತಿಯ ಒಟ್ಟು 51 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಿರತರಾಗಿದ್ದರು. ಒಂದು ವೇಳೆ ಈ ಘಟನೆ ಏನಾದರೂ 1-30 ರ ಮಧ್ಯಾಹ್ನ ಊಟದ ಸಮಯದಲ್ಲಿ ನಡೆದಿದ್ದರೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗುತ್ತಿದ್ದವು~ ಎಂದು ವಿವರಿಸಿದರು.
ಕಳಪೆ ಕಾಮಗಾರಿ ಕಾರಣ: `ನಾಲ್ಕು ಕೊಠಡಿಗಳನ್ನು ಹೊಂದಿರುವ ಈ ಶಾಲಾ ಕಟ್ಟಡ ಶೇಕಡ 90 ರಷ್ಟು ಕಳಪೆಯಾಗಿರುವುದು ಈ ಅವಘಡದಿಂದ ದೃಢಪಟ್ಟಿದೆ.
ಇದನ್ನು ಅವಸರದಲ್ಲಿ ಪೂರ್ಣಗೊಳಿಸಿದ ಪರಿಣಾಮ ಹೀಗಾಗಿದೆ~ ಎಂದು ಗ್ರಾಮಸ್ಥ ನಾರಾಯಣ ಸ್ವಾಮಿ, ನಾಗರಾಜ್ ಹಾಗೂ ಲಕ್ಷ್ಮಣ್ ನೇರವಾಗಿ ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಆರ್‌ಐಡಿಎಫ್‌ನ 13 ನೇ ಹಣಕಾಸು ಯೋಜನೆಯಡಿ ಅಂದಾಜು 24 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡವನ್ನು ಜನವರಿ 24 ರಂದಷ್ಟೇ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು.
ಶೇ. 10 ರಷ್ಟು ಕಾಮಗಾರಿಯೂ ಪೂರ್ಣಗೊಂಡಿರದ ವೇಳೆಯಲ್ಲೇ ಇದನ್ನು ಅವರಸರದಲ್ಲಿ ಪೂರ್ಣಗೊಳಿಸಲಾಗಿತ್ತು~ ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕ ಚಂದ್ರಪ್ಪ ಪ್ರತಿಕ್ರಿಯಿಸಿ, `ಫೆಬ್ರುವರಿ 22 ರಂದು ತರಗತಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಇಡೀ ಕಟ್ಟಡದ ಒಳ ಹಾಗೂ ಹೊರ ಆವರಣ ಸಂಪೂರ್ಣ ಬಿರುಕು ಬಿಟ್ಟಿದೆ. ಯಾವುದೇ ಸಮಯದಲ್ಲಾದರೂ ಬೀಳಬಹುದಾದ ಭೀತಿಯಿದೆ~ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.