ADVERTISEMENT

ಶಿಕ್ಷಕರಲ್ಲಿ ಕರ್ತವ್ಯನಿಷ್ಠೆ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಇರಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ವಿಜಾಪುರ: `ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಮಾಹಿತಿ ಪೂರೈಸುವವರಾಗದೆ, ಅವರ ವ್ಯಕ್ತಿತ್ವ ರೂಪಿಸಿ ವೃತ್ತಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಆ ಮೂಲಕ ಗೌರವ ಸಂಪಾದಿಸಿಕೊಳ್ಳಬೇಕು~ ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗೀತಾ ಬಾಲಿ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.`ಬದಲಾದ ಸನ್ನಿವೇಶದಲ್ಲಿ ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ.

ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ವಿದ್ಯಾರ್ಥಿಗಳ ಬದುಕು ರೂಪಿಸಲು ನಾವು ಏನನ್ನು ಮಾಡುತ್ತಿದ್ದೇವೆ? ಏನು ಮಾಡಬೇಕು? ಎಂಬುದರ ಬಗೆಗೆ ಶಿಕ್ಷಕ ಸಮುದಾಯ ಗಮನ ಹರಿಸಬೇಕಿದೆ~ ಎಂದರು.

~ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಮೋಘವಾದುದು. ಪ್ರತಿಯೊಬ್ಬ ಶಿಕ್ಷಕರು ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವ ಭಾವನೆಯಿಂದ ಕಾಣಬೇಕು. ವಿದ್ಯಾರ್ಥಿಗಳು ಸಹ ಶ್ರದ್ಧೆಯಿಂದ ಕಲಿಯಬೇಕು. ಅಂದಾಗ ಮಾತ್ರ ಶಿಕ್ಷಕರಿಗೂ ಕಲಿಸುವುದಕ್ಕೆ ಉತ್ಸಾಹ ಮೂಡುತ್ತದೆ.

ಕಲಿಯುವವರಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯೇ ಇರದಿದ್ದರೆ ಶಿಕ್ಷಕರು ಕಲಿಸುವ ಉತ್ಸಾಹವನ್ನೇ ಕಳೆದುಕೊಳ್ಳುವ ಅಪಾಯವಿದೆ~ ಎಂದು ಎಚ್ಚರಿಸಿದರು.ಕುಲಸಚಿವರಾದ ಪ್ರೊ. ಜಿ.ಆರ್. ನಾಯಕ್, ಕುಲಸಚಿವೆ (ಮೌಲ್ಯಮಾಪನ) ಪ್ರೊ.ಡಿ.ಎಚ್. ತೇಜಾವತಿ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ.ಎಸ್.ಎಸ್. ವಿಜಯಾ ವೇದಿಕೆಯಲ್ಲಿದ್ದರು.

ಡಾ.ಜಯಾದೇವಿ ಪ್ರಾರ್ಥಿಸಿದರು. ಪ್ರೊ.ಎಸ್.ಎ. ಖಾಜಿ ಸ್ವಾಗತಿಸಿದರು. ಡಾ.ಜೆ.ಎಂ. ಚಂದುನವರ ವಂದಿಸಿದರು. ಡಾ.ಉದಯ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.