ADVERTISEMENT

ಶುಲ್ಕ ನೀತಿ: ಆದೇಶ ಹಿಂಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಗುಲ್ಬರ್ಗ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಯ ಪರಿಷ್ಕರಿಸಿದ ಆದೇಶ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುಲ್ಬರ್ಗ ಘಟಕದ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಅವರ ನಿವಾಸದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಈ ಹಿಂದೆ ಹಿಂದುಳಿದ ವರ್ಗದ (ಪ್ರವರ್ಗ-1, 2, 3) ಅಡಿ ಬರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮೂಲಕ ಕಾಲೇಜುಗಳಿಗೆ ಹಣ ನೀಡಲಾಗುತ್ತಿತ್ತು. ಕಾಲೇಜಿನವರ ಈ ಹಣವನ್ನು ಪರೀಕ್ಷಾ ಶುಲ್ಕವಾಗಿ ವಿಶ್ವವಿದ್ಯಾಲಯಗಳಿಗೆ ತುಂಬುತ್ತಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕಾಲೇಜುಗಳಿಗೆ ಹಣ ನೀಡುವುದಿಲ್ಲ; ವಿದ್ಯಾರ್ಥಿಗಳೇ ತಮ್ಮ ಪೂರ್ಣ ಶುಲ್ಕವನ್ನು ಕಾಲೇಜುಗಳ ಮೂಲಕ ವಿಶ್ವವಿದ್ಯಾಲಯಕ್ಕೆ ಪಾವತಿಸುವಂತೆ ಆದೇಶ ಹೊರಡಿಸಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪರಿಷ್ಕರಿಸಿದ ಆದೇಶ ವಾಪಸು ಪಡೆಯಲು ಒತ್ತಾಯಿಸಿ ಶಶೀಲ ನಮೋಶಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸಂಚಾಲಕ ಮಂಜು ಹತ್ತಿ, ವಿದ್ಯಾನಂದ ಕಾಂಬಳೆ, ಕಾರ್ಯಕರ್ತರಾದ ಶರಣು, ವಿಶಾಲ್, ನಾಗರಾಜ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.