ADVERTISEMENT

ಸಂಗೀತಕ್ಕೆ ವ್ಯಕ್ತಿತ್ವ ಕಟ್ಟುವ ಶಕ್ತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ದಾವಣಗೆರೆ: ಹಾಡಿಗೆ ವ್ಯಕ್ತಿತ್ವವನ್ನು ಕಟ್ಟಿಕೊಡುವ ಶಕ್ತಿಯಿದೆ ಎಂದು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ನಗರದಲ್ಲಿ ಸೋಮವಾರ ನಡೆದ `ಗೀತೋತ್ಸವ -2012ರ~  `ಸುಗಮ ಸಂಗೀತದ ಇತಿಮಿತಿಗಳು- ಹೊಸ ಸಾಧ್ಯತೆಗಳು~ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾಡು ಹವ್ಯಾಸ ಅಲ್ಲ; ಅದೊಂದು ವ್ರತ. ಅದನ್ನು ತೆವಲು ಅಥವಾ ಮನೋರಂಜನೆಗಾಗಿ ಬಳಸಬಾರದು. ಜವಾಬ್ದಾರಿ ಮತ್ತು ಆತ್ಮವಿಶ್ವಾಸವುಳ್ಳ ಕಲಾವಿದ ಸಮಾಜಕ್ಕೆ ಮುಖ್ಯನಾಗುತ್ತಾನೆ ಎಂದರು.

ಗಾಯಕ ಪುತ್ತೂರು ನರಸಿಂಹ ನಾಯಕ್ ಮಾತನಾಡಿ, ಸುಗಮ ಸಂಗೀತ ಶಾಲೆಗಳಲ್ಲಿ ಕಲಿಸುವವರು ಮೊದಲು ಮೂಲ ಸಂಗೀತವನ್ನು ಕಲಿಯಬೇಕು. ಈ ಸಂಗೀತಕ್ಕೆ ಶೈಲಿ ಇಲ್ಲ. ಅದು ಕವಿಯ ಕವನದ ವಸ್ತುವಿನ ಮೇಲೆ ಅವಲಂಬಿತ. ಪರಸ್ಪರ ಪೂರಕ ವಾತಾವರಣ ಇದ್ದರೆ ಸುಗಮ ಸಂಗೀತದ ಬೆಳವಣಿಗೆಗೆ ಯಾವುದೇ ಅಡ್ಡಿ ಇಲ್ಲ ಎಂದು ನುಡಿದರು.

ಸಂಗೀತ ಕಲಾವಿದ ಎನ್.ಎಸ್. ಪ್ರಸಾದ್ ಮಾತನಾಡಿ, ಯಾಂತ್ರಿಕ ಜೀವನವನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ತರಬೇಡಿ. ಕಲೆಯನ್ನು ನಾವು ಹಿಂಬಾಲಿಸಬೇಕೇ ವಿನಃ ಅದು ನಮ್ಮಂದಿಗೆ ರಾಜಿಯಾಗದು ಎಂದರು.

ಗಾಯಕಿ ಅರ್ಚನಾ ಉಡುಪ ಮಾತನಾಡಿ, ಸುಗಮ ಸಂಗೀತ ಕ್ಷೇತ್ರ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತಲೂ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯ. ನಾವು ಧ್ವನಿಯಾಗಬಹುದೇ ಹೊರತು ಇನ್ನೊಬ್ಬರ ಪ್ರತಿಧ್ವನಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಪತ್ರಕರ್ತ ಸುರೇಶ್ಚಂದ್ರ ಮಾತನಾಡಿ, ಸುಗಮ ಸಂಗೀತ ಒಂದು ಪರಂಪರೆ. ಅದಕ್ಕೆ ಯಾವುದೇ ಇತಿಮಿತಿ ಇಲ್ಲ. ಎಲ್ಲ ಸಂಗೀತವೂ ಒಳ್ಳೆಯದೇ. ಆದರೆ, ಅದನ್ನು ಪ್ರಸ್ತುತಪಡಿಸುವ ರೀತಿಯಲ್ಲಿ ಕೆಟ್ಟದಾಗುವ ಸಾಧ್ಯತೆ ಇರುತ್ತದೆ ಅಷ್ಟೇ ಎಂದರು.
ಅಪರ್ಣಾ ಮತ್ತು ಮಾಲತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಉಪಸ್ಥಿತರಿದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT