ADVERTISEMENT

ಸಂಭ್ರಮದಿಂದ ನಡೆದ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST

ಕುಷ್ಟಗಿ: ತಾಲ್ಲೂಕಿನ ಮುದೇನೂರು ಗ್ರಾಮದ ಲಿಂಗೈಕ್ಯ ಡಾ.ಚಂದ್ರಶೇಖರ ಮಹಾಸ್ವಾಮಿಗಳ ಮಠದ ಉತ್ತರಾಧಿಕಾರಿಯಾಗಿ ಅಭಿನವ ಚಂದ್ರಶೇಖರ ಮಹಾಸ್ವಾಮೀಜಿ ಗುರುಪಟ್ಟಾಭಿಷೇಕ ಮಹೋತ್ಸವ ಗುರುವಾರ ಸಂಭ್ರಮ ಸಡಗರದ ಮಧ್ಯೆ ನೆರವೇರಿತು.

ಗುರುಪರಂಪರೆಗೆ ಸೇರಿದ ಈ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ದಿವಾಕರ ದೇವರು (ಪೂರ್ವಾಶ್ರಮದ ಹೆಸರು), ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಗುಮ್ಮಗೋಳ ಗ್ರಾಮದವರು.  ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧೆ ಮತ್ತು ಭಕ್ತಿಯಿಂದ   ಗುರುಪಟ್ಟಾಭಿಷೇಕ ಮಹೋತ್ಸವ ನೆರವೇರಿಸಲಾಯಿತು.

ಬ್ರಾಹ್ಮಿಮುಹೂರ್ತದಿಂದಲೇ ಆರಂಭಗೊಂಡ ಧಾರ್ಮಿಕ ವಿಧಿವಿಧಾನಗಳನ್ನು ಚಳಗೇರಿ ಅರಳೆಲೆ ಹಿರೇಮಠದ ವಿರುಪಾಕ್ಷಲಿಂಗ ಶಿವಾಚಾರ್ಯರು ನೂತನ ಶ್ರೀಗಳಿಗೆ ಜ್ಞಾನೋಪದೇಶ ನೀಡಿ ಅಧಿಕಾರ ಅನುಗ್ರಹಿಸಿದರು.  ಮಠದ ಪರಂಪರೆಯಂತೆ ಪಟ್ಟೆಪೀತಾಂಬರ, ಪೇಟ, ಪಟ್ಟಬಂಧ, ರುದ್ರಾಕ್ಷಿ ಮಾಲೆ ಹಾಗೂ ಮುದ್ರಾ ಉಂಗುರ ಧಾರಣೆ ಮಾಡುವ ಮೂಲಕ ಪಟ್ಟಾಭಿಷೇಕ ವಿಧಾನಗಳನ್ನು ನೆರವೇರಿಸಿದರು. ನೂತನ ಶ್ರೀಗಳ ಪೂರ್ವಾಶ್ರಮದ ತಂದೆತಾಯಿಯವರಾದ ಕೊಟ್ರಯ್ಯಸ್ವಾಮಿ ಹಾಗೂ ಚನ್ನಬಸಮ್ಮ ಮಠದ ಅವರು ಪಟ್ಟಾಭಿಷೇಕದ ಮೊದಲು ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

 ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ನೂತನ ಶ್ರೀಗಳಿಗೆ ‘ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು’ ಎಂಬ ನೂತನ ಅಭಿದಾನದೊಂದಿಗೆ ದಂಡ, ಕಮಂಡಲ ಅನುಗ್ರಹಿಸಿದರು.  ಶಶಿಧರ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ವೈಭವದಿಂದ ನೆರವೇರಿತು.

ಅಭಿನವ ಚಂದ್ರಶೇಖರ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಪೂರ್ಣಕುಂಭ ಕಲಶ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು.  ಜಾನಪದ ಕಲಾಮೇಳದಿಂದ ಮೆರವಣಿಗೆಗೆ ಕಳೆ ಬಂದಿತ್ತು. ಗುರುಪಟ್ಟಾಧಿಕಾರ ಹಾಗೂ ಉಮಾಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಇತ್ತು. ಗ್ರಾಮವನ್ನು ತಳಿರುತೋರಣಗಳಿಂದ ಶೃಂಗರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.