ADVERTISEMENT

ಸಂಭ್ರಮದೊಂದಿಗೆ ಬೃಹನ್ಮಠ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 7:35 IST
Last Updated 7 ಫೆಬ್ರುವರಿ 2011, 7:35 IST

ಸಕಲೇಶಪುರ: ತಾಲ್ಲೂಕಿನ ಯಸಳೂರು ಗ್ರಾಮದಲ್ಲಿ ನೂತನ ತೆಂಕಲಗೋಡು ಬೃಹನ್ಮಠದ ಉದ್ಘಾಟನೆ, ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, ರಂಭಾಪುರಿ ಶ್ರೀಗಳ ಪೀಠಾರೋಹಣದ 20ನೇ ವರ್ಧಂತಿ, ಯಸಳೂರು ಪಟ್ಟಾಧ್ಯಕ್ಷರ ಪಟ್ಟಾಧಿಕಾರದ  ರಜತ ಮಹೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ, ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಪುಪ್ಪಾಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಬಾಳೇಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮಿ, ಉಜ್ಜಯಿನಿ ಮರುಳಸಿದ್ಧ ಶಿವಾಚಾರ್ಯ ಸ್ವಾಮಿ, ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮಿ, ಕಾಶಿ ಜಗದ್ಗುರುಗಳನ್ನು ಭಕ್ತರು ಮೆರವಣಿಗೆ ಮಾಡಿದರು. ಗ್ರಾಮದ ರಸ್ತೆಯ ಎರಡೂ ಬದಿಯಲ್ಲಿ ತಳಿರು ತೋರಣ, ಮನೆಗಳ ಮುಂದೆ ರಂಗೋಲಿಗಳಿಂದ ಶೃಂಗರಿಸಲಾಗಿತ್ತು. ವಾದ್ಯ, ಕಹಳೆ, ಮಲೆನಾಡಿನ ಸುಗ್ಗಿ ಕುಣಿತದ ನಡುವೆ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸಾಗಿದರು.

ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಉದ್ಘಾಟನಾ ಸಮಾರಂಭವನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿ ಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಾಜಿ ಶಾಸಕ ಬಿ.ಬಿ.ಶಿವಪ್ಪ ವಹಿಸಿದ್ದರು.

ವೇದಿಕೆಯಲ್ಲಿ ಬಾಳೇಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮಿ, ಉಜ್ಜಯಿನಿ ಮರುಳಸಿದ್ಧ ಶಿವಾಚಾರ್ಯಸ್ವಾಮಿ, ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮಿ, ಕಾಶಿ ಜಗದ್ಗುರು, ಯಸಳೂರು ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿ, ಮಾಜಿ ಶಾಸಕ ಬಿ.ಆರ್.ಗುರುದೇವ್, ಜಿ.ಪಂ. ಸದಸ್ಯ ಬೈರಮುಡಿ ಚಂದ್ರು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಬಿ.ಪಿ.ಐಸಾಮಿಗೌಡ, ಮೊದಲಾದವರು ಇದ್ದರು.

ಬಾಳೇಹೊನ್ನೂರು ರೇಣುಕಾಚಾರ್ಯ ಗುರುಕುಲ ಇವರಿಂದ ವೇದಘೋಷ ನಡೆಯಿತು, ಮೈಸೂರಿನ ಶಿವರಾತ್ರೇಶ್ವರ ಅಕ್ಕನ ಬಳಗದ ಸದಸ್ಯರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸುಶೀಲಾ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.