ADVERTISEMENT

ಸಂಭ್ರಮದ ತಿರು ಓಣಂ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲಯಾಳಿ ಭಾಷಿಕರು `ತಿರು ಓಣಂ~ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಿದರು.ಈ ಸಂದರ್ಭದಲ್ಲಿ ಮಲೆಯಾಳಿ ಭಾಷೆಯನ್ನಾಡುವ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರ ಒಟ್ಟಿಗೆ ಸೇರಿ `ಓಣಂ~ ಹಬ್ಬದ ಶುಭಾಶಯ  ವಿನಿಮಯ ಮಾಡಿಕೊಂಡು ಸಂತಸಪಟ್ಟರು.

ಹಬ್ಬದ ಸಂದರ್ಭದಲ್ಲಿ ಹೊಸ ಉಡುಗೆ, ತೊಡುಗೆ ತೊಟ್ಟ ಮಹಿಳೆಯರು, ಮಕ್ಕಳು ಒಟ್ಟಿಗೆ ಸೇರಿ ತಮ್ಮ ಮನೆಯಂಗಳದಲ್ಲಿ `ಓಣಂ~ನ  ವೈಶಿಷ್ಟ್ಯವೆನಿಸಿದ `ಪುಷ್ಪ ರಂಗವಲ್ಲಿ~ (ಪೊಳಕಂ) ಬಿಡಿಸಿದ್ದು ಗಮನ ಸೆಳೆಯಿತು. ಮನೆಯಂಗಳವನ್ನು ಸಿಂಗರಿಸಿದ ಮಹಿಳೆಯರು ಕೇರಳ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ ಪುಷ್ಪ ರಂಗವಲ್ಲಿ ಮಧ್ಯೆ ದೀಪವನ್ನಿಟ್ಟು ಬೆಳಗಿಸಿದರು. ರಂಗವಲ್ಲಿ ಸುತ್ತ ಮನೆ ಮಂದಿ, ನೆರೆ ಹೊರೆಯವರು, ನೆಂಟರಿಷ್ಟರ್ಲ್ಲೆಲ ಸೇರಿ ಹಬ್ಬವನ್ನು ಆಚರಿಸಿದರು.

ಹಬ್ಬದ ಅಂಗವಾಗಿ ವಿಶೇಷವಾಗಿ ತಯಾರಿಸಿದ್ದ `ಓಣಂ ಸದ್ಯ~ ಎಂಬ ವಿಶೇಷ ಭೋಜನವನ್ನು ಎಲ್ಲರೂ ಒಟ್ಟಿಗೆ ಸೇರಿ ಸವಿದರು. ಕುಶಾಲನಗರದಲ್ಲಿ ಕೇರಳ ಶೈಲಿಯ ಅತಿಥಿ ಹೋಟೆಲ್‌ನಲ್ಲಿ ಓಣಂ ಅಂಗವಾಗಿ ಬಿಡಿಸಿದ್ದ ಪುಷ್ಪ ರಂಗವಲ್ಲಿ ಮತ್ತು ಓಣಂನ ವಿಶೇಷ ಖಾದ್ಯ `ಓಣಂ ಸದ್ಯ~ ಪ್ರವಾಸಿಗರನ್ನು ಆಕರ್ಷಿಸಿತು.

ಮಲೆಯಾಳಿ ಭಾಷಿಕರು ಜಾತಿ-ಮತ, ಭೇದ-ಭಾವವಿಲ್ಲದೆ  `ಓಣಂ~ ಹಬ್ಬವನ್ನು ಕೂಡಿಗೆ, ಏಳನೇ ಹೊಸಕೋಟೆ, ಸುಂಟಿಕೊಪ್ಪ, ಮಾದಾಪುರ, ಗುಡ್ಡೆಹೊಸೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ  ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.