
ಕಂಪ್ಲಿ: ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ಭಾನುವಾರ ಶ್ರೀ ಕೋಡಿ ವೀರಭದ್ರೇಶ್ವರ ಮಹಾ ರಥೋತ್ಸವ ಸಂಭ್ರಮ, ಸಡಗರಗಳಿಂದ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕೃತಗೊಂಡಿದ್ದ 45 ಅಡಿ ಎತ್ತರದ ತೇರನ್ನು ಸಂಜೆ ಸಾರ್ವಜನಿಕರು ಜಯಘೋಷಗಳೊಂದಿಗೆ ಎಳೆದು ಭಕ್ತಿಸೇವೆ ಸಮರ್ಪಿಸಿದರು. ತೇರು ಸಾಗುವ ಸಂದರ್ಭದಲ್ಲಿ ಅನೇಕ ಭಕ್ತರು ಹಣ್ಣು-ಹೂವು ಎಸೆದು ಹರಕೆ ತೀರಿಸಿದರು.
ರಥೋತ್ಸವದ ಅಂಗವಾಗಿ ದರೋಜಿ ಕೆರೆ ಕೋಡಿ ಬಳಿ ಬೆಟ್ಟದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ರುದ್ರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ ಹಾಗೂ ಭಕ್ತಿಯಿಂದ ನಡೆದವು.
ಕಳೆದ ರಾತ್ರಿ ನಡೆದ ಅಗ್ನಿಕುಂಡೋತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಕೆಲ ಭಕ್ತರು ಅಗ್ನಿಕುಂಡದಲ್ಲಿ ಹಾಯುವ ಮೂಲಕ ಹರಕೆ ತೀರಿಸಿದರು.
ದರೋಜಿ ದೇವಸ್ಥಾನ ಸೇವಾ ಸಮಿತಿ ಮತ್ತು ಸದ್ಭಕ್ತ ಮಂಡಳಿಯವರು, ರೈತ ಮುಖಂಡರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಕೋಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹೊಸದರೋಜಿ ಭೋವಿ ವಿನಾಯಕ ನಾಟಕ ಸಂಘದವರು ರಾತ್ರಿ `ಧರ್ಮ ಅಶ್ವಮೇಧ ಯಾಗ ಅರ್ಥಾತ್ `ಪ್ರಮೀಳೆ ದರ್ಬಾರ್~ ಪೌರಾಣಿಕ ಬಯಲಾಟ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.