ADVERTISEMENT

ಸಕ್ರೆಬೈಲು: ರಂಜಿಸಿದ ಆನೆಗಳ ಹಬ್ಬ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST
ಸಕ್ರೆಬೈಲು: ರಂಜಿಸಿದ ಆನೆಗಳ ಹಬ್ಬ
ಸಕ್ರೆಬೈಲು: ರಂಜಿಸಿದ ಆನೆಗಳ ಹಬ್ಬ   

ಶಿವಮೊಗ್ಗ: ಅಲ್ಲಿ ಆನೆಗಳು ಓಡಿದವು, ಕುಣಿದು ಕುಪ್ಪಳಿಸಿದವು, ಫುಟ್‌ಬಾಲ್ ಆಡಿದವು, ಕಾರಂಜಿ ಚಿಮ್ಮಿಸಿದವು....!

- ಇಲ್ಲಿಗೆ ಸಮೀಪದ ಸಕ್ರೆಬೈಲು ಗ್ರಾಮದ ಆನೆ ಬಿಡಾರದ ಆವರಣದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು.
ಹೆಸರೇ ಸೂಚಿಸುವಂತೆ ಅದು ಆನೆಗಳ ಹಬ್ಬ. ಈ ಹಬ್ಬದಲ್ಲಿ ಸಕ್ರೆಬೈಲ್ ಆನೆಗಳು ಸಿಂಗಾರಗೊಂಡು, ಮಾವುತರ ಆದೇಶಕ್ಕೆ ತಕ್ಕಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ನೆರೆದ ಮಕ್ಕಳಲ್ಲಿ ಪುಳಕ ಉಂಟುಮಾಡಿದವು.

ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ), ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ನಗರಸಭೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ `ಆನೆ ಉತ್ಸವ~ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಆನೆಗಳ ಸಂಖ್ಯೆ ಕಡಿಮೆ. ಆದರೆ, ಮನರಂಜನೆಗೆ ಕೊರತೆ ಇರಲಿಲ್ಲ. ಬಿಡಾರದ ಒಟ್ಟು 18 ಆನೆಗಳ ಪೈಕಿ ಉತ್ಸವದಲ್ಲಿ 10 ಆನೆಗಳು ಭಾಗವಹಿಸಿದ್ದವು. ಇದರಲ್ಲಿ 81 ವರ್ಷದ ಹಿರಿಯ ಆನೆ ಇಂದಿರಾ ಸೇರಿದಂತೆ ಸಾಗರ, ಕಾವೇರಿ, ಕಪಿಲಾ, ಸುಭದ್ರಾ, ಗಂಗೆ, ಇಂದಿರಾ, ಗೀತಾ, ಗೀತಾ   ಆನೆಯ ಮರಿ, ಅಮೃತಾ, ಪ್ರಕೃತಿ ಆನೆಗಳು ಕ್ರೀಡೆಯಲ್ಲಿ ಸಕ್ರಿಯವಾಗಿದ್ದವು.

ಉತ್ಸವದಲ್ಲಿ ಆನೆಗಳು ಸೊಂಡಿಲಿನಿಂದ ಬಲೂನ್‌ಗಳನ್ನು ಬಾನಂಗಳಕ್ಕೆ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ನಡೆದದ್ದು ಆನೆಗಳ ಭರಪೂರ್ ಮನರಂಜನೆ. ರನ್ನಿಂಗ್ ರೇಸ್‌ನಲ್ಲಿ ಅಮೃತಾ ಮೊದಲ ಸ್ಥಾನ ಗಳಿಸಿದರೆ, ಆಲೆ, ಪ್ರಕೃತಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಇಂದಿರಾ, ಆಲೆ, ಅಮೃತಾ, ಸಾಗರ್ `ಫುಟ್‌ಬಾಲ್~ ಆಡಿದವು. ನಂತರ ಅಮೃತಾ ಮತ್ತು ಪ್ರಕೃತಿ ಹಾಗೂ ಆಲೆ ತಮ್ಮ ಸ್ನೇಹಸಮ್ಮಿಲನ ಸಾಬೀತುಪಡಿಸಿದವು. ಬಾಯಿಯಲ್ಲೇ ಕಾರಂಜಿ ಹಾರಿಸಿದ್ದು, ನೆರೆದ ಜನಕ್ಕೆ ಕಾಲೆತ್ತಿ ಸೆಲ್ಯೂಟ್ ಮಾಡಿದ್ದು, ಒಂದರ ಮೇಲೊಂದು ಕಾಲಿಟ್ಟು ಚಿನ್ನಾಟವಾಡಿದ್ದು, ಮಾವುತನಿಗೆ ಸುಸ್ತಾದಾಗ ಹೊತ್ತುತರುವ ರೀತಿ ಎಲ್ಲವೂ ನೆರೆದವರನ್ನು ಹುಬ್ಬೇರಿಸುವಂತೆ ಮಾಡಿದವು. ಪ್ರಕೃತಿ ಮತ್ತು ಆಲಿ  ಗಂಧದ ಗುಡಿ ಚಿತ್ರದ ಹಾಡು `ನಾವಾಡುವ ನುಡಿಯೇ ಕನ್ನಡ ನುಡಿ~ ಹಾಡಿಗೆ ತಕ್ಕಂತೆ ಲಯಬದ್ಧವಾಗಿ ನರ್ತಿಸಿದವು.

ಆದರೆ, ಬಿಡಾರದಲ್ಲಿನ ಆನೆಗಳ ಪೈಕಿ ನಾಲ್ಕು ಆನೆಗಳು `ಮಸ್ತ್~ನಲ್ಲಿವೆ.  ಮಣಿಕಂಠ, ಅಯ್ಯಪ್ಪ ಇನ್ನೂ ಅಷ್ಟಾಗಿ ಪಳಗಿಲ್ಲ. ನೇತ್ರಾವತಿ, ಅದರ ತಾಯಿ ಗೀತಾ ನೋಡಿಕೊಳ್ಳುತ್ತಿದೆ. ಹಾಗಾಗಿ, ಅವ್ಯಾವೂ ಈ ಬಾರಿ ಉತ್ಸವದಲ್ಲಿ ಭಾಗವಹಿಸಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬ್ರಿಜೇಶ್ ಕುಮಾರ್ ತಿಳಿಸಿದರು.

ಉತ್ಸವದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಜಿ.ಪಂ. ಸದಸ್ಯೆ ಶುಭಾ ಕೃಷ್ಣಮೂರ್ತಿ, ಶಾಸಕ ಕಿಮ್ಮನೆ ರತ್ನಾಕರ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.