ADVERTISEMENT

ಸಮಾಧಿ ಕಟ್ಟೆಗೆ ಹಾನಿ: ಪ್ರಕ್ಷುಬ್ಧ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2011, 19:30 IST
Last Updated 5 ಏಪ್ರಿಲ್ 2011, 19:30 IST
ಸಮಾಧಿ ಕಟ್ಟೆಗೆ ಹಾನಿ: ಪ್ರಕ್ಷುಬ್ಧ
ಸಮಾಧಿ ಕಟ್ಟೆಗೆ ಹಾನಿ: ಪ್ರಕ್ಷುಬ್ಧ   

ಚಿಕ್ಕನಾಯಕನಹಳ್ಳಿ: ಪುರಸಭೆಗೆ ಸೇರಿದ ಗೋಕಟ್ಟೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಂಗಳವಾರ ಮಾತಿಗೆ ಮಾತು ಬೆಳೆದು ಕೆಲಹೊತ್ತು ಪ್ರಕ್ಷುಬ್ಧ ವಾತಾವರಣ ಉಂಟಾಯಿತು.

ಕೆಲ ದಿನಗಳ ಹಿಂದೆ ಮಮ್ತಾಜ್ ಎಂಬುವರು ಗೋ ಕಟ್ಟೆಯ ಜಾಗ ತಮಗೆ ಸೇರಿದ್ದಾಗಿ ಅಲ್ಲಿದ್ದ ಸಮಾಧಿಯನ್ನು ಕೆಡವಲು ಮುಂದಾಗಿದ್ದರು. ಆಗ ಪುರಸಭೆ ಸದಸ್ಯೆ ಧರಣಿ ಲಕ್ಕಪ್ಪ, ಸಮಾಧಿಯು ದಫೇದಾರ್ ನಂಜಪ್ಪ ಹಾಗೂ ಅವರ ಮೊಮ್ಮಗನದಾಗಿದ್ದು, ಅದನ್ನು ಕೆಡವಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದು ಸರ್ಕಾರಕ್ಕೆ ಸೇರಿದ ಜಾಗವಾಗಿದೆ. ಪುರಸಭೆಯಿಂದ ಉದ್ಯಾನ ನಿರ್ಮಿಸಲು ಈಗಾಗಲೇ ರೂ. 2 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ವಾದಿಸಿದ್ದರು. ಕೊನೆಗೆ ಪುರಸಭೆ ಮುಖ್ಯಾಧಿಕಾರಿ ಸಮಾಧಿ ಕೆಡವದಂತೆ ತಡೆ ಹಾಕಿದ್ದರು.

ಆದರೆ ಮಂಗಳವಾರ ಮಮ್ತಾಜ್ ಪರವಾಗಿ ಪುರಸಭಾ ಸದಸ್ಯರಾದ ಬಾಬುಸಾಬ್, ಸಿ.ಪಿ.ಮಹೇಶ್ ಅವರು ಒಂದಷ್ಟು ಜನರೊಂದಿಗೆ ಸ್ಥಳಕ್ಕೆ ಬಂದು ಖಾಸಗಿ ಭೂಮಾಪಕರಿಂದ ಜಾಗ ಅಳತೆ ಮಾಡಿಸಲು ಮುಂದಾದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭೆ ಮಾಜಿ ಸದಸ್ಯ ಬೀರಪ್ಪ ಇತರರು ಅಳತೆ ಮಾಡದಂತೆ ತಡೆಯೊಡ್ಡಿದರು. ಸರ್ಕಾರದ ಭೂಮಾಪಕರು ಅಳತೆ ಮಾಡುವಂತೆ ಪಟ್ಟು ಹಿಡಿದರು. ಕೆಡವಿದ ಸಮಾಧಿಯನ್ನು ಮತ್ತೆ ಕಟ್ಟಿಕೊಡುವಂತೆ ಆಗ್ರಹಿಸಿದರು. ಇದರಿಂದಾಗಿ ಎರಡು ಗುಂಪುಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಈ ಘಟನೆ ಹಿನ್ನೆಲೆಯಲ್ಲಿ ಸಮಾಧಿಗೆ ಸಂಬಂಧಿಸಿದ ಕುಟುಂಬದವರಾದ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದು, ಸಮಾಧಿ ರಕ್ಷಿಸುವಂತೆ ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.