ADVERTISEMENT

ಸಾಧಕಿಯರ ಆದರ್ಶ ಅಳವಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ರಾಯಚೂರು: ತಾಂತ್ರಿಕ ಯುಗದ ಈ ಕಾಲದಲ್ಲಿ ಹಿಂದಿನಂತೆಯೇ ಮಹಿಳೆಯರು ಇರಬೇಕಾಗಿಲ್ಲ ಎಂಬುದನ್ನು ಅನೇಕ ಸಾಧಕಿಯರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಅಂಥ ಸಾಧಕಿಯರ ಆದರ್ಶ ಅಳವಡಿಸಿಕೊಂಡು ಮಹಿಳಾ ಸಮುದಾಯ ಉನ್ನತಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆಯಬೇಕು. ಜೀವನಕ್ಕೆ, ಕುಟುಂಬ ನಿರ್ವಹಣೆಗೆ ಉಪಯುಕ್ತವಾದ ವೃತ್ತಿ ತರಬೇತಿ ಪಡೆದು ಆರ್ಥಿಕ ಉನ್ನತಿ ಸಾಧಿಸಬೇಕು. ಮಹಿಳಾ ಸಬಲೀಕರಣಕ್ಕಾಗಿಯೇ ಸರ್ಕಾರವು ಹತ್ತಾರು ಯೋಜನೆ ರೂಪಿಸಿದೆ. ಅವುಗಳ ಪ್ರಯೋಜನ ಪಡೆಯಬೇಕು. ಕೀಳರಿಮೆ, ಮುಜುಗರ ಬಿಟ್ಟಾಗ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಡಾ.ಶೀಲಾದಾಸ್ ಅವರು, ಮಹಿಳೆಯರ ಸಾಧನೆಗೆ ಕುಟುಂಬ ವರ್ಗದ ಸಹಕಾರ, ಪ್ರೋತ್ಸಾಹ ಅವಶ್ಯ. ತಾರತಮ್ಯ, ತಾತ್ಸಾರದಿಂದ ಹೆಣ್ಣು ಮಗು ನೋಡದೆ ಸೂಕ್ತ ರೀತಿ ಪ್ರೋತ್ಸಾಹ ನೀಡಿದಾಗ ಪ್ರತಿಭೆ ಮೆರೆಯಲು ಸಾಧ್ಯವಿದೆ ಎಂದು ತಿಳಿಸಿದರು. ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಯಸ್ಕರ ಇಲಾಖೆ ಶಿಕ್ಷಣ ಅಧಿಕಾರಿ ಆರ್. ಇಂದಿರಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್, ಡಿಡಿಪಿಐ ಅಮೃತ ಬೆಟ್ಟದ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಅಜೀಜಾ ಸುಲ್ತಾನಾ, ಶಿಕ್ಷಕರಾದ ರಾಮಣ್ಣ ಹವಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಗ್ರಾಮ ವಿಕಾಸ ಸಂಸ್ಥೆಯ ಹಫಿಜುಲ್ಲಾ ಮತ್ತಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.