ADVERTISEMENT

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ರಾಮನಗರ: ಸಾಮೂಹಿಕ ನಾಯಕತ್ವದಡಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಎದುರಿಸಲಿದೆ ಎಂದು ಗೃಹ ಹಾಗೂ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದರು.ನಗರದ ಬಸ್ ನಿಲ್ದಾಣ ಪರಿಶೀಲಿಸಲು ಆಗಮಿಸಿದ್ದ ಸಚಿವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಚಿವರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಅನಂತಕುಮಾರ್ ಹಾಗೂ ರೆಡ್ಡಿ ಸಹೋದರರ ನೇತೃತ್ವದಲ್ಲಿ ಈ ಉಪ ಚುನಾವಣೆ ಎದುರಿಸುವುದಾಗಿ ಅವರು ಹೇಳಿದರು.

ಕಾನೂನು ಬಾಹಿರ:  ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ಏಕಾಏಕಿ ಸಿಬಿಐ ದಾಳಿ ನಡೆಸಿರುವುದು ಕಾನೂನು ಬಾಹಿರವಾಗಿದೆ. ಯಾವುದೇ ನೋಟಿಸ್ ನೀಡದೆ ಸಿಬಿಐ ಕೈಗೊಂಡ ನಿರ್ಧಾರ ಅಮಾನವೀಯವಾದುದು ಎಂದು ಸಚಿವರು ಟೀಕಿಸಿದರು.

2ಜಿ ಸ್ಪೆಕ್ಟ್ರಂ ಸೇರಿದಂತೆ ಹಲವಾರು ಹಗರಣಗಳು ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಬಿಜೆಪಿ ನಾಯಕರ ಮೇಲೆ ಸಿಬಿಐ ದಾಳಿ ನಡೆಸಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದರು.ಕಾಂಗ್ರೆಸ್ ಯಾವಗಲೂ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರಿ ಪರ ಧೋರಣೆ ಹೊಂದಿರುವ ಪಕ್ಷ. ತನ್ನ ವಿರುದ್ಧ ಸೆಟೆದು ನಿಲ್ಲುವವರನ್ನು ಧಮನ ಮಾಡಲು ಸಿಬಿಐ ಅನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಗೃಹ ಸಚಿವರೂ ಆಗಿರುವ ಅಶೋಕ ಆರೋಪಿಸಿದರು.

ಆಂಧ್ರ ಪ್ರದೇಶದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ರೆಡ್ಡಿಗಳ ವಿರುದ್ಧ ಏಕೆ ಈ ಕ್ರಮ ತೆಗೆದುಕೊಳ್ಳಲಿಲ್ಲ. ಅವರ ಮರಣದ ನಂತರ ಅವರ ಮಗ ಜಗನ್ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ನಂತರ ಏಕೆ ರೆಡ್ಡಿ ಸಹೋದರರ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ಧ ಮಾತನಾಡಿದ ಗಾಂಧಿವಾದಿ ಅಣ್ಣಾ ಹಜಾರೆ, ಶ್ರೀಶ್ರೀ ರವಿಶಂಕರ್ ಗುರೂಜಿ, ಅರವಿಂದ ಕೇಜ್ರೀವಾಲ್, ಶಾಂತಿಭೂಷಣ್ ಅವರ ವಿರುದ್ಧ ವಿವಿಧ ರೀತಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಪ್ರಜಾಪ್ರಭುತ್ವ ವಿರೋಧಿ ದಾರಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಇದೀಗ ರೆಡ್ಡಿ ಸಹೋದರರ ಮೇಲೆ ಈ ರೀತಿ ಕ್ರಮಕ್ಕೆ ಮುಂದಾಗಿದೆ.

ಇದನ್ನೆಲ್ಲ ಗಮನಿಸಿದರೆ 1975ರಲ್ಲಿ ಕಾಂಗ್ರೆಸ್ ದೇಶದ ಮೇಲೆ ಏರಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ. ಈಗಿನ ಕಾಂಗ್ರೆಸ್ ಕೂಡ ಮತ್ತೊಂದು ಬಗೆಯ ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದೆ ಎಂದು ದೂಷಿಸಿದರು.

ಪಕ್ಷಕ್ಕೆ ಧಕ್ಕೆಯಿಲ್ಲ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಬಿಜೆಪಿಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗಿಲ್ಲ ಎಂದು ಅವರು ಹೇಳಿದರು. ಶಾಸಕ ಕೆ.ರಾಜು, ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಸಚಿವರ ಜತೆ ಬಸ್ ನಿಲ್ದಾಣದ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.