ADVERTISEMENT

ಸಿಇಟಿ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST
ಸಿಇಟಿ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ
ಸಿಇಟಿ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ   

ಶಿವಮೊಗ್ಗ: ರಾಜ್ಯ ಸರ್ಕಾರ 2012-13ನೇ ಶೈಕ್ಷಣಿಕ ಸಾಲಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕೆ ರಾಜಮಟ್ಟದ ಸಿಇಟಿಯನ್ನೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ನೌಕರರ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಬಿ.ಎಚ್. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರ ರಾಜ್ಯಮಟ್ಟದ ಸಿಇಟಿಯನ್ನು ವೈದ್ಯಕೀಯ ಪ್ರವೇಶಕ್ಕೆ ರದ್ದುಪಡಿಸಿ, ಬದಲಿಯಾಗಿ ರಾಷ್ಟ್ರಮಟ್ಟದ ಪರೀಕ್ಷೆ ಜಾರಿಗೆ ತರಲು ಅಧಿಸೂಚನೆ ಹೊರಡಿಸಿದೆ.

ಹಾಗೆಯೇ, ಎಂಜಿನಿಯರಿಂಗ್ ಪ್ರವೇಶಕ್ಕೆ ಐ-ಸಿಟ್ ಪರೀಕ್ಷೆ ಜಾರಿ ತರಲು ಮುಂದಾಗಿದೆ. ಆದರೆ, ಈ ಬೆಳವಣಿಗೆಗಳು 2012-13ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ವಿಜ್ಞಾನದ ವಿಷಯ ಅಭ್ಯಾಸ ಮಾಡುತ್ತಿರುವ ಬಹುಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಷ್ಟ್ರಮಟ್ಟದ ನೆಟ್/ಐ-ಸಿಟ್ ಪರೀಕ್ಷೆಗಳು ರಾಜ್ಯದ ಪದವಿಪೂರ್ವ ಶಿಕ್ಷಣ ಮಂಡಳಿಯ ಪಠ್ಯಕ್ರಮಕ್ಕೆ ಅನುಗುಣವಾಗಿಲ್ಲ. ಅಭ್ಯಾಸ ಮಾಡದೆ ಇರುವ ಪಠ್ಯಕ್ರಮದ ಮೇಲೆ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಅಸಮಾನತೆಯುಳ್ಳ ಸ್ಪರ್ಧೆಯನ್ನು ಎದುರಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೆಟ್/ಐ-ಸಿಟ್ ಪರೀಕ್ಷೆಗಳಿಂದ ವಿನಾಯ್ತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಎಸ್.ವಿ. ಗುರುರಾಜ್, ಎಂ.ಎಚ್. ಕೃಷ್ಣಮೂರ್ತಿ, ಎ.ಈ. ರಾಜಶೇಖರ್, ಎಸ್.ಬಿ. ಅಶೋಕ್‌ಕುಮಾರ್, ಪ್ರವೀಣ್ ಮಹಿಷಿ, ಕಲೀಮುಲ್ಲಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.