ADVERTISEMENT

ಸೈಕಲ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST

ಕೊಪ್ಪಳ: ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೂಡಲೇ ಸೈಕಲ್‌ಗಳನ್ನು ವಿತರಣೆ ಮಾಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ನ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸಂಘಟನೆಯ ಜಿಲ್ಲಾ ಅಧ್ಯಕ್ಷ ಗುರುರಾಜ ದೇಸಾಯಿ ಮಾತನಾಡಿ, ಸೈಕಲ್ ಬದಲಾಗಿ ಹಣ ನೀಡಲಾಗುವುದು ಎಂದು ಹೇಳಲಾಯಿತು. ನಂತರ ಹಣ ಬದಲಾಗಿ ಸೈಕಲ್‌ಗಳನ್ನೇ ನೀಡುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಟಿಸಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸೈಕಲ್‌ಗಳನ್ನು ವಿತರಣೆ ಮಾಡಬೇಕು. ಕಳೆದ ವರ್ಷ ಸಕಾಲಕ್ಕೆ ಪಠ್ಯಪುಸ್ತಕ ವಿತರಣೆಯಾಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ಅಂತಹ ಸ್ಥಿತಿ ನಿರ್ಮಾಣವಾಗದೇ ಇರಲು ಮುಂಚಿತವಾಗಿಯೇ ಪಠ್ಯಪುಸ್ತಕ ವಿತರಿಸಬೇಕು. ಆರ್,ಬಿ.ಸಿ., ಎನ್.ಆರ್.ಬಿ.ಸಿ. ಹಾಗೂ ಉಪಗ್ರಹ ಆಧಾರಿತ ಯೋಜನೆಗಳನ್ನು ದುರಪಯೋಗ ಪಡಿಸಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಎಲ್ಲಾ ಸರ್ಕಾರಿ ಶಾಲೆಗಳಿಗೆ ಕುಡಿವ ನೀರು, ಶೌಚಾಲಯ ಒದಗಿಸಬೇಕು, ಶಿಕ್ಷಕ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸಮಿತಿ ಉಪಾಧ್ಯಕ್ಷ ಅಮರೇಶ ಕಡಗದ, ಸದಸ್ಯರಾದ ಸುಭಾನ್ ಸೈಯದ್, ಆನಂದ್ ಗುರಿಕಾರ, ನಾಗರಾಜ ಬೆಣಕಲ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.