ಚನ್ನರಾಯಪಟ್ಟಣ: ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ ಇಲ್ಲಿನ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 10.30ಕ್ಕೆ ಕಾಲೇಜು ಆವರಣದಲ್ಲಿ ಸೇರಿದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ವಿದ್ಯಾರ್ಥಿಗಳ ಒಂದು ಗುಂಪು ಕಾಲೇಜು ಆವರಣದಲ್ಲಿನ ಬಿ.ಇಡಿ., ಪದವಿ ಪೂರ್ವ ಹಾಗೂ ಐಟಿಐ ಕಾಲೇಜಿಗೆ ತೆರಳಿ ಕಾಲೇಜು ತರಗತಿ ಬಹಿಷ್ಕರಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ವಿದ್ಯಾರ್ಥಿಗಳು ಕಾಲೇಜು ಆವರಣದಿಂದ ಹೊರಹೋಗದಂತೆ ಕಾಲೇಜಿನ ಮುಖ್ಯ ದ್ವಾರಕ್ಕೆ ಬೀಗ ಹಾಕಿದರು.
ಕಾಲೇಜಿನಲ್ಲಿ ಸುಮಾರು 1400 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಸಂಖ್ಯೆಯ ಅನುಸಾರ ಶೌಚಾಲಯ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ಸೌಕರ್ಯವಿಲ್ಲ. ಈಗಿರುವ ಶೌಚಾಲಯದಲ್ಲೂ ಸರಿಯಾಗಿ ನೀರು ಬರುವುದಿಲ್ಲ. ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ದುರ್ವಾಸನೆ ಬರುತ್ತಿದೆ. ಸಮೀಪದ ಕೊಠಡಿಗಳಲ್ಲಿ ಪಾಠ ಕೇಳಲು ಆಗುತ್ತಿಲ್ಲ. ಇದನ್ನು ಸರಿಪಡಿಸುವಂತೆ ಹಲವು ತಿಂಗಳಿಂದ ಪ್ರಾಂಶುಪಾಲರನ್ನು ಒತ್ತಾಯಿಸಿದರೂ ಅವರು ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಸಮಸ್ಯೆ ನಿವಾರಣೆಗೆ ಕಳೆದ ತಿಂಗಳು ಮನವಿ ನೀಡಿ ಒಂದು ತಿಂಗಳು ಗಡುವು ನೀಡಲಾಗಿತ್ತು. ಅದಕ್ಕೆ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸಬೇಕಾಗಿದೆ. ಅವೈಜ್ಞಾನಿಕವಾಗಿ ವಿದ್ಯಾರ್ಥಿನಿಯರ ಶೌಚಾಲಯ ನಿರ್ಮಿಸಲಾಗಿದೆ. ಅದನ್ನು ತೆರವುಗೊಳಿಸಿ ಕಾಲೇಜಿನ ಕೆಳಭಾಗದಲ್ಲಿ ಶೌಚಾಲಯ ನಿರ್ಮಿಸಬೇಕು. ಜೊತೆಗೆ ವಿಶ್ರಾಂತಿ ಕೊಠಡಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಆಂತರಿಕ ಅಂಕ ಕಡಿಮೆಗೊಳಿಸಲಾಗಿದೆ. ಇದನ್ನು ಸರಿಪಡಿಸಬೇಕು ಒತ್ತಾಯಿಸಿದರು.
-----------
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.