ADVERTISEMENT

ಸೌಲಭ್ಯ ಒದಗಿಸಲು ಸ್ವಸಹಾಯ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:35 IST
Last Updated 20 ಜನವರಿ 2011, 19:35 IST

ಮೂಡಿಗೆರೆ: ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವಂತೆಯೇ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ತಮಗೂ ನೀಡಬೇಕು ಎಂದು ಆಗ್ರಹಿಸಿ ಗೋಣಿಬೀಡಿನ ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ ಮತ್ತು ಇಂಚರ ಒಕ್ಕೂಟ ಆಶ್ರಯದಲ್ಲಿ ತಾಲ್ಲೂಕಿನ ವಿವಿಧ ಸ್ವಸಹಾಯ ಸಂಘಗಳ ಸದಸ್ಯೆಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ 825 ಮಹಿಳಾ ಸ್ವಸಹಾಯ ಸಂಘಗಳಲ್ಲಿ 13,265 ಬಡ ಮಹಿಳೆಯರು ಸ್ವಸಹಾಯ ಸಂಘ ಸ್ಥಾಪಿಸಿ, ಅಭಿವೃದ್ಧಿ ಚಟುವಟಿಕೆ ನಡೆಸುತ್ತಿದ್ದಾರೆ. ಸರ್ಕಾರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಮಾತ್ರ ಸಬ್ಸಿಡಿ ಸೌಲಭ್ಯದ ಸಾಲ, ಸುತ್ತುನಿಧಿ ನೀಡುತ್ತಿದ್ದು, ಇತರೆ ಸಂಘಗಳತ್ತ ತಾರತಮ್ಯ ತೋರುತ್ತಿದೆ. ಎಂದು ಪ್ರತಿಭಟನಾಕಾರರು ದೂರಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಮಹಿಳಾ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಶಿರಸ್ತೆದಾರ್ ಅಂಜನಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು. ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜಸೇವಾ ಸಂಘ ಗೋಣಿಬೀಡು ಸಂಚಾಲಕಿ ಸಿಸ್ಟರ್ ಶೋಭಾ, ಇಂಚರ ಒಕ್ಕೂಟದ ಜೈನಬಿ, ರತ್ನ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.