ADVERTISEMENT

ಸ್ಕೌಟ್ಸ್- ಗೈಡ್ಸ್ ರಾಜ್ಯ ಪುರಸ್ಕಾರಕ್ಕೆ ಐವರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:30 IST
Last Updated 26 ಫೆಬ್ರುವರಿ 2012, 19:30 IST
ಸ್ಕೌಟ್ಸ್-  ಗೈಡ್ಸ್ ರಾಜ್ಯ ಪುರಸ್ಕಾರಕ್ಕೆ ಐವರು ಆಯ್ಕೆ
ಸ್ಕೌಟ್ಸ್- ಗೈಡ್ಸ್ ರಾಜ್ಯ ಪುರಸ್ಕಾರಕ್ಕೆ ಐವರು ಆಯ್ಕೆ   

ಚಿಕ್ಕಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಅತ್ಯುನ್ನತ ಪ್ರಶಸ್ತಿಯೆಂದೇ ಪರಿಗಣಿಸಲ್ಪಡುವ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ವಿದ್ಯಾರ್ಥಿನಿಯೊಬ್ಬರು ಸೇರಿದಂತೆ ಜಿಲ್ಲೆಯ ಒಟ್ಟು ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಚಿಕ್ಕಬಳ್ಳಾಪುರದ ವಿಷ್ಣುಪ್ರಿಯಾ ಕಾಲೇಜಿನ ವಿದ್ಯಾರ್ಥಿನಿ ಮೊನಿಷಾ, ಶಿಡ್ಲಘಟ್ಟದ ಸರಸ್ವತಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳಾದ ಆರೀಫ್ ಪಾಷಾ ಮತ್ತು ಆಸೀಫ್ ಪಾಷಾ, ಶಿಡ್ಲಘಟ್ಟದ ಡಾಲ್ಫಿನ್ ಶಾಲೆಯ ವಿದ್ಯಾರ್ಥಿಗಳಾದ ಯಾಸೀನ್ ಬೇಗ್ ಮತ್ತು ರಹೀಮ್ ಬೇಗ್ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಧ್ಯಪ್ರದೇಶದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುವರು.

ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ದೀರ್ಘ ಕಾಲವರೆಗೆ ಅತ್ಯುತ್ತಮ ಸೇವೆ ಮಾಡಿ, ಪರಿಣತಿ ಗಳಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಇನ್ನೂ ಹೆಚ್ಚಿನ ಸಾಧನೆ ಮಾಡಿದವರು ರಾಷ್ಟ್ರ ಪುರಸ್ಕಾರಕ್ಕೆ ಆಯ್ಕೆಯಾಗುತ್ತಾರೆ.

`ಪ್ರಶಸ್ತಿಗೆ ಆಯ್ಕೆಯಾದ ಐವರು ವಿದ್ಯಾರ್ಥಿಗಳು ಸುಮಾರು ನಾಲ್ಕು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪುರಸ್ಕಾರ ಪ್ರಶಸ್ತಿ ಪಡೆದವರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ~ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟನಾ ಆಯುಕ್ತ ಸಿದ್ದೇಶಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಕೊಂಡಿರುವ ನಾವು ಅದರಿಂದ ಶಿಸ್ತು ಮತ್ತು ಸಂಯಮ ಕಲಿತಿದ್ದೇವೆ. ದೇಶಸೇವೆ ಮಾಡುವುದೇ ಪರಮಗುರಿಯೆಂದು ನಮಗೆ ತರಬೇತಿ ನೀಡಲಾಗುತ್ತದೆ. ಅದಕ್ಕೆ ಅನುಸಾರವಾಗಿಯೇ ನಾವು ನಡೆದುಕೊಳ್ಳುತ್ತೇವೆ~ ಎಂದು ವಿದ್ಯಾರ್ಥಿಗಳು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.