ADVERTISEMENT

ಹಕ್ಕುಪತ್ರಕ್ಕೆ ಕೊಳೆಗೇರಿ ನಿವಾಸಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ದಾವಣಗೆರೆ: ಮನೆಗಳ ಹಕ್ಕುಪತ್ರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ನೇತೃತ್ವದಲ್ಲಿ ಕೊಳೆಗೇರಿ ನಿವಾಸಿಗಳು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಬಡತನ ರೇಖೆಗಿಂತ ಕೆಳಗಿರುವ ದೀನ-ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಸೇರಿದ ಸಾವಿರಾರು ಕುಟುಂಬಗಳು ಜಿಲ್ಲೆಯ ನೂರಕ್ಕೂ ಹೆಚ್ಚು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
 
ರಾಜ್ಯ ಸರ್ಕಾರ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಬಜೆಟ್ ನೀಡಬೇಕು. ಕೊಳೆಗೇರಿ ನಿವಾಸಿಗಳ ಮನೆಗಳಿಗೆ ಹಕ್ಕುಪತ್ರ ಕೊಡಬೇಕು ಎಂದು ಆಗ್ರಹಿಸಿದ ಅವರು, ಮಹಾನಗರ ಪಾಲಿಕೆಯಿಂದ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಯೋಜನೆಯಲ್ಲಿ 30 ಸಾವಿರ ಅರ್ಜಿಗಳನ್ನು ಪಡೆದು ಯಾವುದೇ ನಿವೇಶನ ನೀಡಿಲ್ಲ, ಎಂದು ದೂರಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಸಮೀವುಲ್ಲಾ (ಚಿಕ್ಕನಹಳ್ಳಿ), ಜಿಲ್ಲಾ ಸಂಚಾಲಕ ಕೆ. ಮಂಜುನಾಥ್, ಎಚ್.ಎಸ್. ಸೈಫುಲ್ಲಾ, ಎಂ.ಸಿ. ನಾಗರಾಜ್, ಹೆಗ್ಗೆರೆ ರಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.