ADVERTISEMENT

ಹಕ್ಕುಪತ್ರ: ಕೊಳೆಗೇರಿ ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:20 IST
Last Updated 1 ಫೆಬ್ರುವರಿ 2011, 18:20 IST

ಚಿತ್ರದುರ್ಗ: ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಳೆಗೇರಿ ನಿವಾಸಿಗಳು ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ನಗರಸಭೆ ಮುಂದೆ ಧರಣಿ ನಡೆಸಿದರು.

ಕೊಳೆಗೇರಿ ನಿವಾಸಿಗಳು, ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಸಾವಿರಾರು ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಲ್ಲದೆ ಜೀವನ ಸಾಗಿಸುತ್ತಿವೆ.ಇದುವರೆಗೆ ಶೌಚಾಲಯ, ಒಳಚರಂಡಿ, ವಿದ್ಯುತ್ ಸಂಪರ್ಕ ಮುಂತಾದ ಯಾವುದೇ ರೀತಿಯ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಕೊಳೆಗೇರಿ ನಿವಾಸಿಗಳು ವಾಸಿಸುವ ಜಾಗದಲ್ಲಿ ಯಾವುದೇ ಹಕ್ಕುಪತ್ರ ಅಥವಾ ಇತರೆ ದಾಖಲೆಗಳು ಇಲ್ಲ. ಆದ್ದರಿಂದ ತಕ್ಷಣ ಕೊಳೆಗೇರಿ ನಿವಾಸಿಗಳಿಗೆ ಸ್ವಂತ ಸೂರು ಪಡೆಯಲು ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಬಡವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಅಥವಾ ವಸತಿ ವ್ಯವಸ್ಥೆ ಕಲ್ಪಿಸಬೇಕು. ಕೊಳೆಗೇರಿ ನಿವಾಸಿಗಳ ಅಭಿವೃದ್ಧಿಗಾಗಿ 2011-12ರಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಮತ್ತು ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಕೊಳೆಗೇರಿ ನಿವಾಸಿಗಳ ಅಭಿವೃದ್ಧಿಗಾಗಿ ಸಮಗ್ರ ನೀತಿ ಜಾರಿಗೊಳಿಸಬೇಕು ಮತ್ತು ಯಶಸ್ವಿನಿ ಯೋಜನೆ ಅಡಿಯಲ್ಲಿ ಆರೋಗ್ಯ ವಿಮೆ ಕಾರ್ಡ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್, ತಾಲ್ಲೂಕು ಅಧ್ಯಕ್ಷ ಎಚ್. ನೂರುಲ್ಲಾ, ಕಾರ್ಯದರ್ಶಿ ಡಿ.ಎಂ. ಅಮೃತೇಶ್, ಇಮಾಮ್‌ಸಾಬ್, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.