ADVERTISEMENT

ಹಜಾರೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 19:30 IST
Last Updated 8 ಏಪ್ರಿಲ್ 2011, 19:30 IST
ಹಜಾರೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ
ಹಜಾರೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ   

 ಹಾಸನ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಆರಂಭಿಸಿರುವ ಆಂದೋಲನ ಬೆಂಬಲಿಸಿ ಹಾಸನದಲ್ಲಿ ವಿವಿಧ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಸಂಘಟನೆಗಳು ಶುಕ್ರವಾರ  ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

ವಕೀಲರು, ದಲಿತ ಸಂಘಟನೆಗಳು, ಹಿಂದುಳಿದ ವರ್ಗದವರು, ವಿವಿಧ ಮಹಿಳಾ ಸಂಘಟನೆಗಳು, ಜಾತಿ ಸಂಘಟನೆಗಳ ಪ್ರತಿನಿಧಿಗಳು, ಕೆಲವು ರಾಜಕೀಯ ಪಕ್ಷದ ನಾಯಕರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದ ನಾಗರಿಕರು ಅಲ್ಲಿ ಗಾಂಧೀಜಿ ಪ್ರತಿಮೆಗೆ ಹಾರ ಹಾಕಿ ಸತ್ಯಾಗ್ರಹ ಆರಂಭಿಸಿದರು. ಅನೇಕ ಮಂದಿ ಅಣ್ಣಾ ಹಜಾರೆ ಅವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು.

ಮನಗುಂಡಿಯ ಬಸವಾನಂದ ಸ್ವಾಮೀಜಿ ಮಾತನಾಡಿ, ‘ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ನಮ್ಮ ಹಿರಿಯರು ಸರ್ವಸ್ವವನ್ನು ತ್ಯಜಿಸಿ ಸ್ವಾತಂತ್ರ್ಯ ತಂದುಕೊಟ್ಟರು. ಈಗ ದೇಶವ್ಯಾಪಿಯಾಗಿರುವ ಭ್ರಷ್ಟಾಚಾರ, ಲಂಚಗುಳಿತನ, ಮೋಸ-ವಂಚನೆಗಳಿಂದಾಗಿ ನಮ್ಮ ಸ್ವಾತಂತ್ರ್ಯಕ್ಕೇ ಅಪಾಯ ಬಂದೊದಗಿದೆ. ದೇಶದ ಉಳಿವಿಗಾಗಿ ಅಣ್ಣಾ ಅವರ ಐದು ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಒಪ್ಪಬೇಕು. ಪ್ರಧಾನಿಯಿಂದ ಆರಂಭಿಸಿ ಎಲ್ಲರೂ ಲೋಕಪಾಲ ಮಸೂದೆಯಡಿ ಬರಬೇಕು. ಅಷ್ಟೇ ಅಲ್ಲ ಸ್ವತಃ ರಾಷ್ಟ್ರಪತಿ ಅವರನ್ನೂ ಈ ಕಾನೂನಿನ ವ್ಯಾಪ್ತಿಗೆ ತರಬೇಕು ಎಂಬುದು ನನ್ನ ಅಭಿಪ್ರಾಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.