ADVERTISEMENT

ಹದಗೆಟ್ಟ ಮಹಾರಾಷ್ಟ್ರ ಗಡಿ ರಸ್ತೆ: ಸಂಚಾರ ಕಷ್ಟ

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ಬಸವಕಲ್ಯಾಣ ತಾಲ್ಲೂಕಿನ ಜಾಜನಮುಗಳಿಯಿಂದ ಮಹಾರಾಷ್ಟ್ರದ ಶಿರಸಿಗೆ ಹೋಗುವ ರಸ್ತೆ ತುಂಬ ಹದಗೆಟ್ಟಿದೆ
ಬಸವಕಲ್ಯಾಣ ತಾಲ್ಲೂಕಿನ ಜಾಜನಮುಗಳಿಯಿಂದ ಮಹಾರಾಷ್ಟ್ರದ ಶಿರಸಿಗೆ ಹೋಗುವ ರಸ್ತೆ ತುಂಬ ಹದಗೆಟ್ಟಿದೆ   

ಬಸವಕಲ್ಯಾಣ: ತಾಲ್ಲೂಕಿನ ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮಗಳ ರಸ್ತೆಗಳು ತೀರ ಹದಗೆಟ್ಟಿವೆ. ಆ ಕಡೆಯ (ಮಹಾರಾಷ್ಟ್ರದ) ರಸ್ತೆ ಸರಿಯಾಗಿದ್ದರೆ ನಮ್ಮ ಕಡೆಯ ರಸ್ತೆಯಲ್ಲಿ ಬರೀ ತಗ್ಗುಗಳಿದ್ದು, ಸಂಚಾರ ಕಷ್ಟವಾಗುತ್ತಿದೆ.
ಬಸವಕಲ್ಯಾಣ ನಗರದಿಂದ ಕೇವಲ 25 ಕಿ.ಮೀ. ದೂರದಲ್ಲಿ ಮಹಾರಾಷ್ಟ್ರದ ಗಡಿ ಇದೆ.

ಇಲ್ಲಿಂದ ಆ ಕಡೆಯ ಗ್ರಾಮಗಳಿಗೆ ಮುಖ್ಯವಾಗಿ ಪ್ರತಾಪುರ- ಮಹಮ್ಮದಾಪುರ, ಜಾಜನಮುಗಳಿ- ಶಿರಸಿ ಮತ್ತು ಮಿರಖಲ್- ಶಹಾಜಹಾನಿ ಔರಾದ್ ಎಂಬ ಮೂರು ಮಾರ್ಗಗಳಲ್ಲಿ ವಾಹನಗಳು ಸಂಚರಿಸುತ್ತವೆ. ಆದರೆ ಇವು ತೀರ ಹದಗೆಟ್ಟಿದ್ದರಿಂದ ಸಂಚಾರ ಸಮಸ್ಯೆಯಾಗಿದೆ.

ಪ್ರತಾಪುರ ಮತ್ತು ಹುಲಸೂರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಜನರು ಹೆಚ್ಚಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಹಾರಾಷ್ಟ್ರದ ಲಾತೂರ್, ನಿಲಂಗಾದ ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ. ಅಲ್ಲಿ ಇಲ್ಲಿನಕ್ಕಿಂತ ಹೆಚ್ಚಿನ ಬೆಲೆ ದೊರೆಯುವ ಕಾರಣ ಕೃಷಿ ಉತ್ಪನ್ನಗಳನ್ನು ಅಲ್ಲಿಗೆ ಒಯ್ದು ಮಾರಾಟ ಮಾಡುತ್ತಾರೆ.
ಈಭಾಗದ ಅನೇಕ ಕುಟುಂಬಗಳು ಆ ಕಡೆಯ ಜನರೊಂದಿಗೆ ನಂಟು ಹೊಂದಿದ್ದಾರೆ. ಇದರಿಂದಾಗಿ ಅಲ್ಲಿಗೆ ಹೋಗಿ ಬರುವ ಸಂದರ್ಭಗಳೂ ಹೆಚ್ಚಾಗಿರುತ್ತವೆ.

ಆದರೆ ರಸ್ತೆಗಳ ಸ್ಥಿತಿ ಹದಗೆಟ್ಟು ಡಾಂಬರು ಕಿತ್ತುಕೊಂಡು ಹೋಗಿದ್ದರಿಂದ ಬಸ್, ಜೀಪ್ ಮತ್ತು ದ್ವಿಚಕ್ರ ವಾಹನ ಸಹ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಘೋಟಾಳದ ಗುರಣ್ಣ ಜಮಾದಾರ ಅಳಲು ತೋಡಿಕೊಳ್ಳುತ್ತಾರೆ.
ಈಚೆಗೆ ಈ ರಸ್ತೆಗಳ ದುರಸ್ತಿಗೆ ಹಣ ಮಂಜೂರಾಗಿದೆ. ಆದರೂ ಮಿರಖಲ್ ರಸ್ತೆಯ ಕಾಮಗಾರಿ ಬಿಟ್ಟರೆ ಬೇರೆ ರಸ್ತೆಗಳಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಲ್ಲದೆ ಮಿರಖಲ್-ಖಂಡಾಳ ರಸ್ತೆ ಕೆಲಸವೂ ಸಾಕಷ್ಟು ವಿಳಂಬ ಗತಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂಡಿದ್ದಾರೆ. ಸಂಬಂಧಿತರು ಈ ಕಡೆ ಗಮನ ಹರಿಸಿ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.