ADVERTISEMENT

ಹಳ್ಳಿ ಹುಡುಗಿಯ ಕೆಎಎಸ್ ಕನಸು

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಹುಬ್ಬಳ್ಳಿ: `ಕಾಲಿಗೆ ನಂಜು ಏರಿ ತಂದೆ ಆಸ್ಪತ್ರೆ ಸೇರಿದ್ದಾರೆ. ಇಂತಹ ಹೊತ್ತಲ್ಲೇ ಈ ವಿಷಯ ಕೇಳಿ ಅಳಬೇಕೋ ಖುಷಿ ಪಡಬೇಕೊ ಎಂದು ತಿಳಿಯುತ್ತಿಲ್ಲ~ ಎಂದು ಬಿಕ್ಕಳಿಸಿದಳು ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದ ಹುಡುಗಿ ಶಶಿಕಲಾ ಡಫಲಿ.

ಕುಬಿಹಾಳ ಗ್ರಾಮದಲ್ಲಿರುವ  ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಶಿಕಲಾ ಪಿಯು ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ 94.83 (569 ಅಂಕ) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ಗ್ರಾಮೀಣ ಪರಿಸರದಲ್ಲಿ ಬೆಳೆಯುತ್ತಿರುವ ಈ ಹುಡುಗಿಗೆ ಮೊಬೈಲು, ಅಂತರ್ಜಾಲಗಳ ಸಂಪರ್ಕ ಇಲ್ಲ. ಆದರೆ, ತನ್ನ ಈ ಸಾಧನೆಗೆ ಅಪ್ಪ-ಅಮ್ಮಂದಿರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನವೇ ಕಾರಣ ಎನ್ನುತ್ತಾಳೆ ಶಶಿಕಲಾ.

ಶಶಿಕಲಾಳ ತಂದೆ ಶಿವಪ್ಪ-ತಾಯಿ ರತ್ನಮ್ಮ. ಐವರು ಹೆಣ್ಣು ಮತ್ತು ಮೂವರು ಗಂಡು ಮಕ್ಕಳಿರುವ ಈ ತುಂಬು ಕುಟುಂಬದಲ್ಲಿ ಈಕೆ ಆರನೆಯವಳು. ಎಂಟು ಎಕರೆ ಹೊಲದಲ್ಲಿ ಬೆಳೆಯುವ ಬೆಳೆಯಿಂದ ಬರುವ ಆದಾಯವೇ ಕುಟುಂಬಕ್ಕೆ ಆಧಾರ. ಇಡೀ ಊರಿನಲ್ಲಿ ಈ ವರ್ಷ ಪಿಯುಸಿಗೆ ಓದಲು ಹೋಗುತ್ತಿದ್ದ ಏಕಮಾತ್ರ ಹುಡುಗಿ ಈಕೆ. ಗುರುವಿನಹಳ್ಳಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕಾಲೇಜಿಗೆ ಡೆದುಕೊಂಡು  ಹೋಗುತ್ತಿದ್ದಳು.

`ಮೊದಲ ಸ್ಥಾನ ಗಳಿಸಬೇಕು ಎಂದು ಓದಿದವಳಲ್ಲ ನಾನು. ಆದರೆ, ನನ್ನ ಅಪ್ಪ-ಅಮ್ಮ, ಕಾಲೇಜಿನ ಗುರುಗಳು ನೀ ಓದಬಲ್ಲೆ ಎಂದು ನನ್ನಲ್ಲಿ ಧೈರ್ಯ ತುಂಬುತ್ತಿದ್ದರು. ನನ್ನ ಶ್ರಮದ ಜೊತೆಗೆ ಅವರ ಈ ಪ್ರೇರಣೆಯೇ ಸಾಧನೆಗೆ ಮುನ್ನುಡಿಯಾಯಿತು~ ಎನ್ನುವ ಶಶಿಕಲಾ ಮುಂದೆ ಕೆಎಎಸ್ ಮಾಡುವ ಕನಸು ಹೊಂದಿದ್ದಾಳೆ. ಆದರೂ ಪದವಿ ಶಿಕ್ಷಣ ಪಡೆಯಲು ಯಾವ ಕಾಲೇಜು ಸೇರಬೇಕು ಎಂಬುದನ್ನು ನಿರ್ಧರಿಸಿಲ್ಲ~ ಎನ್ನುತ್ತಾಳೆ.

`ತಾಯಿ ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾರೆ. ಆಕೆಯೇ ನನಗೆ ಇಂಗ್ಲಿಷ್, ಹಿಂದಿ ಕಲಿಸಿದ್ದು. ಕಾಲೇಜಿನ ಮಾಸ್ತರರೂ ಅಷ್ಟೇ. ಸ್ಪೆಷಲ್ ಕ್ಲಾಸುಗಳ ಮೂಲಕ ನನ್ನಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು. ಇವತ್ತು ನನ್ನ ಫಲಿತಾಂಶ ತಿಳಿಸಿದವರು ಅವರೇ. ಅವರ ಋಣ ಮರೆಯಲಾಗದು~ ಎಂದು ಸ್ಮರಿಸುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.