ADVERTISEMENT

ಹಾಸನ ಜಿ.ಪಂ. ಅಧ್ಯಕ್ಷರ ಆಯ್ಕೆ ವೇಳೆ ಗದ್ದಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:30 IST
Last Updated 17 ಫೆಬ್ರುವರಿ 2011, 17:30 IST

ಹಾಸನ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮುಖಂಡರ ಮೇಲೆ ಸಿಟ್ಟಿಗೆದ್ದ ಜೆಡಿಎಸ್‌ನ ಕೆಲ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿ ಪೊಲೀಸರ ಲಾಠಿ ರುಚಿ ಸವಿದ ಘಟನೆ ಗುರುವಾರ ನಡೆದಿದೆ.

ಈ ಗೊಂದಲದ ನಡುವೆಯೇ ಹಾಸನ ಜಿಲ್ಲಾ ಪಂಚಾಯಿತಿಯ ಮೊದಲ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್  ಪಕ್ಷದ ಬಿ.ಡಿ. ಚಂದ್ರೇಗೌಡ (ಕೋಗಿಲಮನೆ ಕ್ಷೇತ್ರ) ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಅರಕಲಗೂಡು  ಕ್ಷೇತ್ರದ ಸದಸ್ಯೆ ಪಾರ್ವತಮ್ಮ ನಂಜುಂಡಾಚಾರ್ ಅವರು ಅವಿರೋಧವಾಗಿ ಆಯ್ಕೆಯಾದರು.

 ಹಾಸನ ಜಿ.ಪಂ.ನ ಒಟ್ಟು 40 ಸ್ಥಾನಗಳಲ್ಲಿ 33 ಜೆಡಿಎಸ್, 5 ಬಿಜೆಪಿ, 2 ಸ್ಥಾನ ಕಾಂಗ್ರೆಸ್ ಪಾಲಾಗಿವೆ. ಇದರಿಂದ ಜಿ.ಪಂ. ಮೊದಲನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಒಳಗೇ ಭಾರಿ ಪೈಪೋಟಿ ಉಂಟಾಗಿತ್ತು. ಇವರಲ್ಲಿ ಲಕ್ಷ್ಮಣಗೌಡ, ದೇವೇಗೌಡ (ಪಾಪಣ್ಣಿ), ಬೈರಮುಡಿ ಚಂದ್ರು ಹಾಗೂ ಸತ್ಯನಾರಾಯಣ ಅವರ ಹೆಸರು ಮುಂಚೂಣಿಯಲ್ಲಿದ್ದವು.

ಪಕ್ಷದ ಮುಖಂಡರು ಬುಧವಾರ ಬೆಳಿಗ್ಗೆ ಸಭೆ ಸೇರಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಗ್ಗೆ ಚರ್ಚಿಸಿದ್ದರು. ಹೆಸರನ್ನು ಕಾರ್ಯಕರ್ತರಿಗೆ ತಿಳಿಸದಿದ್ದರೂ, ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಸತ್ಯನಾರಾಯಣ ಅಥವಾ ಬೈರಮುಡಿ ಚಂದ್ರು ಅವರೇ ಅಧ್ಯಕ್ಷರಾಗುವರು ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದರು. ಆದರೆ ಗುರುವಾರ ಬೆಳಿಗ್ಗೆ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಕೋಗಿಲಮನೆ ಕ್ಷೇತ್ರದ ಚಂದ್ರೇಗೌಡ ಅವರ ಹೆಸರು ಬಂತು. ‘ಮೊದಲ ಅವಧಿಗೆ ಚಂದ್ರೇಗೌಡ ಮಾತ್ರ ನಾಮಪತ್ರ ಸಲ್ಲಿಸಬೇಕು ಎಂದು ಹೈಕಮಾಂಡ್‌ನಿಂದ ಆದೇಶ ಬಂದಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ ಘೋಷಿಸಿದರು. ಇಷ್ಟಾದ ಕೂಡಲೇ ಪ್ರವಾಸಿ ಮಂದಿರದ ಮುಂಭಾಗದಲ್ಲೇ ಕಾರ್ಯಕರ್ತರ ಪ್ರತಿಭಟನೆ ಆರಂಭವಾಯಿತು. ಸತ್ಯನಾರಾಯಣ ಬೆಂಬಲಿಗರು ಜವರೇಗೌಡ ಹಾಗೂ ಇತರ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಇದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಮುಂದೆ ಸೇರಿದ ಸತ್ಯನಾರಾಯಣ ಅವರ ಬೆಂಬಲಿಗರು ಅಲ್ಲಿಯೂ ಪಕ್ಷದ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.