ಹಿರಿಯೂರು:ಟಾಟಾ ಏಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟು 25ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹುಳಿಯಾರು ರಸ್ತೆಯಲ್ಲಿ ಬರುವ ಹಿಂಡಸಕಟ್ಟೆ ಗ್ರಾಮದ ಸಮೀಪ ಗುರುವಾರ ಸಂಜೆ ನಡೆದಿದೆ.
ಸ್ಥಳದಲ್ಲೇ ಏಳು ಜನ, ಆಸ್ಪತ್ರೆಯಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.
ಹಿರಿಯೂರು ತಾಲ್ಲೂಕಿನ ನಾಯ್ಕರಕೊಟ್ಟಿಗೆ ಗ್ರಾಮದ ರಮೇಶ್ (22), ಹಿಂಡಸಕಟ್ಟೆಯ ಉಮ್ಮಣ್ಣ (55), ಹಂದಿಗನಡು ಗ್ರಾಮದ ಮೈಲಾರಿ (25), ಹಿಂಡಸಕಟ್ಟೆ ಗ್ರಾಮದ ತಿಪ್ಪೇಸ್ವಾಮಿ (35), ಬ್ಯಾರಮಡು ಗ್ರಾಮದ ಕರೀಂಸಾಬ್ (18), ಚಿಗಳಿಕಟ್ಟೆ ಗ್ರಾಮದ ದೇವಮ್ಮ (45), ಮಹೇಶ್ (35), ಹನುಮಣ್ಣ (45) ಹಾಗೂ ಶಾರದಮ್ಮ (60), ಸೀಗೆಹಟ್ಟಿಯ ಬಾಲಜ್ಜ (70) ಮೃತಪಟ್ಟವರಾಗಿದ್ದು, 35 ವರ್ಷ ವಯಸ್ಸಿನ ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಭರಂಪುರದ ಹನುಮಂತಪ್ಪ, ಬ್ಯಾರಮಡು ಸತೀಶ್, ಹಿಂಡಸಕಟ್ಟೆ ಚಿಕ್ಕಮ್ಮ ಮತ್ತು ಕೃಷ್ಣಮೂರ್ತಿ, ನಾಯ್ಕರಕೊಟ್ಟಿಗೆ ಪ್ರಕಾಶ್, ಚಿಗಳಿಕಟ್ಟೆ ಶಿವರಾಜ್, ನೀಲಮ್ಮ, ಬಡಗೊಲ್ಲರಹಟ್ಟಿಯ ಬಾಲಕ್ಕ, ಪವಿತ್ರ ಮತ್ತು ಸುರೇಶ್, ಬಬ್ಬೂರಿನ ಮಲಕಪ್ಪ, ಇದ್ದಲನಾಗೇನಹಳ್ಳಿಯ ಮಂಜುಳಾ ಗಾಯಗೊಂಡಿದ್ದು ಎಲ್ಲರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟಾಟಾ ಏಸ್ ವಾಹನದಲ್ಲಿ 25 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಿರಿಯೂರು ಪಟ್ಟಣದಲ್ಲಿ ಯುಗಾದಿ ಹಬ್ಬಕ್ಕೆ ಬೇಕಿದ್ದ ಬಟ್ಟೆ, ದಿನಸಿ ಸಾಮಾನು ಖರೀದಿಸಿ ಊರಿಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹಿಂದಿನ ವರ್ಷವೂ ಯುಗಾದಿ ಹಬ್ಬದ ಹಿಂದಿನ ದಿನ ಚಳ್ಳಕೆರೆ ರಸ್ತೆಯಲ್ಲಿ ಕಳವಿಬಾಗಿ ಸಮೀಪ ಸಂಭವಿಸಿದ ಲಾರಿ ಅಪಘಾತದಲ್ಲಿ ಆರು ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.