ADVERTISEMENT

ಹೀಗೊಂದು ವಿಶಿಷ್ಟ ಮದುವೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ವಿಜಾಪುರ:  ಆತ ವಿದುರ, ಆಕೆ ಕುಬ್ಜೆ. ಅವರಿಬ್ಬರೂ ಸಪ್ತಪದಿ ತುಳಿಯಲು ಇದಾವುದೂ ಅಡ್ಡಿಯಾಗಲಿಲ್ಲ. ಸ್ನೇಹಿತರು-ಹಿತೈಷಿಗಳು ಅವರ ಮದುವೆಗೆ ಸಾಕ್ಷಿಯಾದರು.ಇಲ್ಲಿಯ ಇಂಡಿ ರಸ್ತೆಯ ರೈಲ್ವೆ ಗೇಟ್ ಹತ್ತಿರವಿರುವ ಲಕ್ಷ್ಮಿ ಗುಡಿಯಲ್ಲಿ ಭಾನುವಾರ ಈ ವಿಶಿಷ್ಟ ಮದುವೆ ನಡೆಯಿತು.

ನಾಗಠಾಣ ಗ್ರಾಮದ ಕೃಷಿ ಕಾರ್ಮಿಕ ಮಡಿವಾಳಪ್ಪ ಪಟ್ಟಣಶೆಟ್ಟಿ (40) ಅಲಿಯಾಬಾದ ಗ್ರಾಮದ ಸುಮಾರು ಮೂರು ಅಡಿ ಎತ್ತರದ ಶೋಭಾ (28) ಅವಳನ್ನು ಮದುವೆಯಾದರು.`ಮಡಿವಾಳಪ್ಪನಿಗೆ ಈಗಾಗಲೆ ಮದುವೆಯಾಗಿತ್ತು. ಮೂವರು ಮಕ್ಕಳೂ ಇದ್ದಾರೆ. ಮೂರು ವರ್ಷಗಳ ಹಿಂದೆ ಆತನ ಪತ್ನಿ ನಿಧನಳಾಗಿದ್ದಾಳೆ.

ಮಕ್ಕಳ ಪಾಲನೆ ಮಾಡುವುದೇ ಆತನಿಗೆ ಸಮಸ್ಯೆಯಾಗಿತ್ತು. ಕುಬ್ಜೆ ಎಂಬ ಕಾರಣಕ್ಕೆ ಶೋಭಾಳನ್ನು ವಿವಾಹವಾಗಲು ಯಾರೂ ಮುಂದೆ ಬಂದಿರಲಿಲ್ಲ. ಅವರಿಬ್ಬರನ್ನು ಒಪ್ಪಿಸಿ ನಾವು ಮದುವೆ ಮಾಡಿಸಿದೇವು~ ಎಂದು ಅಲ್ಲಿದ್ದ ಹಿರಿಯರು ಹೇಳಿದರು.

ವಿಜಾಪುರ ಕೈಗಾರಿಕಾ ಪ್ರದೇಶದ ಆಯಿಲ್ ಮಿಲ್‌ಗಳವರು ಹಾಗೂ ಕಾರ್ಮಿಕರು ಈ ಮದುವೆಯ ವೆಚ್ಚ ಭರಿಸಿದರು. ತಂದೆಯ ಮದುವೆಗೆ ಆ ಮಕ್ಕಳೂ ಸಾಕ್ಷಿಯಾದರು.

ಬಾಲ್ಯವಿವಾಹಕ್ಕೆ ತಡೆ: ಇಲ್ಲಿಯ ಗಚ್ಚಿನಕಟ್ಟಿ ಕಾಲೋನಿಯ ಲಕ್ಷ್ಮಿ ಗುಡಿಯಲ್ಲಿ ನಡೆಯಲಿದ್ದ ಬಾಲ್ಯವಿವಾಹವನ್ನು ಅಧಿಕಾರಿಗಳು ಹಾಗೂ ಸಾಂತ್ವನ ಕೇಂದ್ರದವರು ತಡೆದ ಘಟನೆ ಭಾನುವಾರ ನಡೆಯಿತು.

ಭುಂಯ್ಯಾರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಿಕೊಡಲಾಗುತ್ತಿತ್ತು. ವ್ಯಕ್ತಿಯೊಬ್ಬರು ದೂರವಾಣಿ ಮೂಲಕ ನೀಡಿದ ಮಾಹಿತಿ ಆಧರಿಸಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಲಹೆಗಾರ್ತಿ ಸುಜಾತಾ ಕಲಬುರ್ಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಿ.ಪಿ. ವಸಂತ ಪ್ರೇಮಾ, ದಾನಮ್ಮದೇವಿ ಮಹಿಳಾ ಶೈಕ್ಷಣಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಮಠಪತಿ ಅವರು ಸ್ಥಳಕ್ಕೆ ಧಾವಿಸಿ ಪೊಲೀಸರ ನೆರವಿನಿಂದ ಈ ವಿವಾಹ ನಿಲ್ಲಿಸಿದರು.

ಬಾಲ್ಯವಿವಾಹ ತರುವ ಆಪತ್ತಿನ ಬಗ್ಗೆ ಪಾಲಕರಿಗೆ ತಿಳಿಹೇಳಿದಾಗ ಅವರು ಮದುವೆಯನ್ನು ನಿಲ್ಲಿಸಲು ಸಮ್ಮತಿಸಿ ಮುಚ್ಚಳಿಕೆ ಪತ್ರ ಬರೆದುಕೊಟ್ಟರು ಎಂದು ಸುಜಾತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.