ಚಿಕ್ಕೋಡಿ: ತಾಲ್ಲೂಕಿನ ಜೋಡಕುರಳಿ ಗ್ರಾಮದ ಕೃಷ್ಣ ಬಾಳು ಹೆಳವರ ಎಂಬುವವರು ತಮ್ಮ ಎತ್ತಿನಗಾಡಿಗೆ ಬೇಕಾದ ಬೆಳಕನ್ನು ಸೌರಶಕ್ತಿಯಿಂದ ಪಡೆದುಕೊಳ್ಳುತ್ತಿದ್ದಾರೆ.
ವಂಶಾವಳಿಯ ಇತಿಹಾಸವನ್ನು ಬಿಚ್ಚಿಡುತ್ತಾ ಊರೂರು ಅಲೆಯುವ ಹೆಳವರದ್ದು ಕಷ್ಟದ ಬದುಕು. ಮಳೆ, ಗಾಳಿ, ಚಳಿ ಎನ್ನದೇ ಇವರು ಮಕ್ಕಳು-ಮರಿಗಳೊಂದಿಗೆ ಚಕ್ಕಡಿ ಕಟ್ಟಿಕೊಂಡು ಊರೂರು ಅಲೆಯುತ್ತಾರೆ. ಊರ ಬದಿಯ ಗಾಯರಾಣ ಜಾಗದಲ್ಲೋ, ಪಂಚಾಯತಿ ಕಟ್ಟೆಯಲ್ಲೋ ಬೀಡು ಬೀಡುವ ಇವರು ರಾತ್ರಿ ವೇಳೆಯಲ್ಲಿ ಚಿಮಣಿ ಅಥವಾ ಲಾಟೀನು ಬೆಳಕನ್ನೇ ಅವಲಂಬಿಸುವುದು ರೂಢಿ.
ಆದರೆ ಜೋಡಕುರಳಿ ಗ್ರಾಮದ ಕೃಷ್ಣ ಹೆಳವರ ಅವರು ತಮ್ಮ ಗಾಡಿಗೆ ಸೋಲಾರ್ ಉಪಕರಣ ಅಳವಡಿಸಿದ್ದು, ಅದು ದಿನವಿಡೀ ಸೂರ್ಯಕಿರಣಗಳನ್ನು ಹೀರಿಕೊಂಡು, ರಾತ್ರಿ ಹೊತ್ತಲ್ಲಿ ಬೆಳಕು ನೀಡುತ್ತಿದೆ.
`ಸುಮಾರು 15 ಸಾವಿರ ರೂಪಾಯಿ ಖರ್ಚು ಮಾಡಿ ಈ ಸೌಲಭ್ಯವನ್ನು ಅವರು ಅಳವಡಿಸಿಕೊಂಡಿದ್ದು, ಇದರಿಂದ ಗಾಡಿಯಲ್ಲಿಯೇ ಟಿ.ವಿ.ಯನ್ನೂ ನೋಡಬಹುದು. ಮೊಬೈಲ್ ಫೋನ್ ಚಾರ್ಜ್ ಮಾಡಿಕೊಳ್ಳಬಹುದು, ಡಿವಿಡಿ ಮೂಲಕ ಚಲನಚಿತ್ರಗಳನ್ನು ನೋಡಬಹುದು. ವಿದ್ಯುತ್ ಬಲ್ಬ್‌ಗಳಿಂದ ರಾತ್ರಿಯಿಡೀ ಬೆಳಕು ದೊರಕುತ್ತದೆ~ ಎನ್ನುತ್ತಾರೆ ಕೃಷ್ಣ ಹೆಳವರ.
`ರಾತ್ರಿ ಹೊತ್ತಿನ್ಯಾಗ ಚಿಮಣಿ ಬೆಳಕಿನ್ಯಾಗ ಅಡಗಿ ಮಾಡಾಕ ಕಷ್ಟ ಆಗತೈತ್ರಿ, ಹುಳಾಹುಪ್ಪಟ್ಟಿ ಬರತಾವ್ರೀ, ಮಕ್ಕಳ- ಮರಿಗೋಳನ್ನ ಮಗ್ಗಲಾಗ ತಗೊಂಡ, ಕೈಯಾಗ ಜೀವಾ ಹಿಡಕೊಂಡ ಇರಬೇಕಾಗತದರೀ. ಆದರ ಈ ದೀಪ ಇರೋದ್ರಿಂದ ನಿಶ್ಚಿಂತೆಯಿಂದ ಇರಾಕ ಆಗತೈತಿ ನೋಡ್ರಿ....~ ಎನ್ನುತ್ತಾರೆ ಹೆಳವರ ಮಹಿಳೆಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.