ADVERTISEMENT

ಹೇಮಾವತಿ ಅಣೆಕಟ್ಟಿಯಿಂದ ನೀರು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಹಾಸನ: ಹೇಮಾವತಿ ಜಲಾಶಯದಿಂದ ಗುರುವಾರ ತಡರಾತ್ರಿ ಕೆಆರ್‌ಎಸ್ ಜಲಾಶಯಕ್ಕೆ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಶುಕ್ರವಾರ ಹಾಸನ ಹಾಗೂ ಗೊರೂರಿನಲ್ಲಿ ಪ್ರತಿಭಟನೆ ನಡೆಯಿತು.

~ಮಳೆ ಇಲ್ಲದೆ ಜಿಲ್ಲೆಯ ಸ್ಥಿತಿ ಚಿಂತಾಜನಕವಾಗಿದೆ, ಜಲಾಶಯ ತುಂಬಿಲ್ಲ. ಇದರ  ಹೊರತಾಗಿಯೂ ಕಳೆದ ಕೆಲವು ದಿನಗಳಿಂದ ಜಲಾಶಯದಿಂದ ನೀರು ಹೊರಗೆ ಬಿಡಲಾಗುತ್ತಿದೆ. ಗುರುವಾರ ತಡರಾತ್ರಿಯಿಂದ ನಸುಕಿನ 4.30 ರೊಳಗಿನ ಅವಧಿಯಲ್ಲಿ ನದಿ ಮತ್ತು ನಾಲೆಗಳಿಗೆ ಸೇರಿ ಒಟ್ಟು 16 ಸಾವಿರ ಕ್ಯೂಸೆಕ್  ನೀರನ್ನು ಬಿಡಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜಿಲ್ಲೆಯ ಜನರು ಕುಡಿಯುವ ನೀರಿಗೂ ಪರಿತಪಿಸಬೇಕಾಗುತ್ತದೆ~ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಬೆಳಿಗ್ಗೆ ಹಾಸನದ ಎನ್.ಆರ್. ವೃತ್ತದಲ್ಲಿ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿದ ಬಳಿಕ ನೇರವಾಗಿ ಗೊರೂರಿಗೆ ತೆರಳಿದ ಪ್ರತಿಭಟನಾಕಾರರು ಅಲ್ಲಿ ಮೆರವಣಿಗೆ ನಡೆಸಿದರು. ಜಲಾಶಯದ ಗೇಟ್ ಬಳಿ ಸ್ವಲ್ಪಹೊತ್ತು ಪ್ರತಿಭಟನೆ ನಡೆಸಿದ ಬಳಿಕ ಗೊರೂರು ಸೇತುವೆ ಮೇಲೆ ಕುಳಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಬಳಿಕ ಅಲ್ಲಿಂದ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿ ಆವರಣಕ್ಕೆ ಬಂದು ಕಚೇರಿಗೆ ಮುತ್ತಿಗೆ ಹಾಕಿದರು.

ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್.ಎಸ್.ಪ್ರಕಾಶ್, ಮಾಜಿ ಸಚಿವ ಎ.ಟಿ. ರಾಮಸ್ವಾಮಿ, ಬಿ.ವಿ. ಕರೀಗೌಡ, ಮಾಜಿ ಸಂಸದ ಎಚ್.ಕೆ. ಜವರೇಗೌಡ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣ, ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆಯ ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.