ADVERTISEMENT

ಹೈ.ಕ. ಅಭಿವೃದ್ಧಿಗೆ ರೈಲು ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಕೊಪ್ಪಳ: ಸಂವಿಧಾನದ 371ನೇ ವಿಧಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಗುರುವಾರ ಇಲ್ಲಿ ಮೀರಜ್-ಬಳ್ಳಾರಿ ರೈಲು ತಡೆದು ಪ್ರತಿಭಟನೆ ನಡೆಸಿದರು.ಬೆಳಿಗ್ಗೆ ರೈಲು ನಿಲ್ದಾಣದಲ್ಲಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು, 11.45ಕ್ಕೆ ನಿಲ್ದಾಣಕ್ಕೆ ಮೀರಜ್-ಬಳ್ಳಾರಿ ಪ್ಯಾಸೆಂಜರ್ ರೈಲು ಆಗಮಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ರೈಲು ತಡೆದರು.

ನಂತರ ಕೆಲ ಪ್ರತಿಭಟನಾಕಾರರು ರೈಲಿನ ಎಂಜಿನ್ ಮೇಲೆ ಹತ್ತಿದರೆ, ಉಳಿದವರು ಮುಂಭಾಗದಲ್ಲಿ ನಿಂತು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಕವಲೂರು, ರಾಜ್ಯದ ಇತರ ಕಂದಾಯ ವಿಭಾಗಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂದರು.

ಈ ಭಾಗದ ಅಭಿವೃದ್ಧಿಗಾಗಿ ಪೂರಕವಾಗುವ ನಿಟ್ಟಿನಲ್ಲಿ ಸಂವಿಧಾನದ 371ನೇ ವಿಧಿಗೆ ಸೂಕ್ತ ತಿದ್ದುಪಡಿ ತರುವುದು ಅಗತ್ಯ. ಆದರೆ, ಈಚೆಗೆ ಈ ಸಂಬಂಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು, ತಿದ್ದುಪಡಿ ಸಾಧ್ಯವಿಲ್ಲ ಎಂದಿರುವುದು ಸರಿಯಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.ಈ ಕೂಡಲೇ 371ನೇ ವಿಧಿಗೆ ಸೂಕ್ತ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ, ಅನುಮೋದನೆ ನೀಡಬೇಕೆಂದು ಆಗ್ರಹಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಪಾಟೀಲ, ಚೇತನ್‌ಕುಮಾರ, ಗವಿಸಿದ್ಧಪ್ಪ ಹಂಡಿ, ಮಹಿಳಾ ಘಟಕದ ಸದಸ್ಯರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.