ADVERTISEMENT

ಹೈ.ಕ. ಭಾಗಕ್ಕೆ ಪ್ರತ್ಯೇಕ ಬಜೆಟ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಗುಲ್ಬರ್ಗ: ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದರು.

ಇಲ್ಲಿನ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸೋಮವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಭಾಗದ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಬೇಕು. ಇದಕ್ಕಾಗಿ ರೂ. 5,000 ಕೋಟಿ ನಿಗದಿಗೊಳಿಸಬೇಕು, ಡಾ. ನಂಜುಂಡಪ್ಪ ವರದಿಯಂತೆ ಈ ಭಾಗದ ಪ್ರಗತಿಗೆ ಈ ಸಾಲಿನಲ್ಲಿ ರೂ. 3,500 ಕೋಟಿ ಒದಗಿಸಬೇಕು ಎಂದು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ (ಎಚ್.ಕೆ.ಡಿ.ಬಿ.) ರೂ. 100 ಕೋಟಿ ನಿಗದಿ ಮಾಡಿ ರಸ್ತೆ, ಕುಡಿವ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಬೇಕು, ತೊಗರಿ ಮಂಡಳಿಗೆ ರೂ. 100 ಕೋಟಿ ಹಣ ನಿಗದಿ ಮಾಡಬೇಕು, ವಿಭಾಗೀಯ ಕೇಂದ್ರವಾದ ಗುಲ್ಬರ್ಗ ಅಭಿವೃದ್ಧಿಗೆ ರೂ. 400 ಕೋಟಿ ಬಿಡುಗಡೆ ಮಾಡಬೇಕು, ಹೈ.ಕ. ವಿಮೋಚನಾ ದಿನ ಆಚರಣೆಗೆ ಒಂದು ಕೋಟಿ ಹಣ ಮೀಸಲಿಡಬೇಕು ಎಂಬಿತ್ಯಾದಿ ನಿರ್ಣಯಗಳು ಸೇರಿದಂತೆ ಒಟ್ಟು 23 ನಿರ್ಧಾರಗಳನ್ನು ಕೈಗೊಳ್ಳಲಾಯಿತು.
 
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಲಕ್ಷ್ಮಣ ದಸ್ತಿ, ಎಸ್.ಎನ್. ಮೋದಿ, ನಾಗ ಲಿಂಗಯ್ಯ ಮಠಪತಿ, ಕಲ್ಯಾಣರಾವ ಪಾಟೀಲ, ಸಂಗೀತಾ ಕಟ್ಟಿಮನಿ ಮತ್ತಿ ತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.