ADVERTISEMENT

ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ಕಟ್ಟಡಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 8:40 IST
Last Updated 16 ಫೆಬ್ರುವರಿ 2011, 8:40 IST

ಹರಪನಹಳ್ಳಿ: ರಾಜ್ಯದಾದ್ಯಂತ ಇರುವ 880ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ತಿಳಿಸಿದರು.ಮಂಗಳವಾರ ತಮ್ಮ ಖಾಸಗಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ತಹಶೀಲ್ದಾರ್ ಹುದ್ದೆಯ ಅಧಿಕಾರಿ ನೇಮಕದೊಂದಿಗೆ ನಾಡಕಚೇರಿಗಳು ಅಸ್ತಿತ್ವದಲ್ಲಿವೆ. ಆದರೆ, ಶೇ. 20ರಷ್ಟು ಕಚೇರಿಗಳು ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಕಡೆಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಅಂದಾಜು ಯೋಜನಾ ವರದಿ ತಯಾರಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗಿದೆ ಎಂದರು.

ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಕಾರ್ಯಭಾರ ಕಡಿಮೆಗೊಳಿಸುವ ಉದ್ದೇಶದೊಂದಿಗೆ ಹೆಚ್ಚುವರಿ ತಹಶೀಲ್ದಾರ್ ನೇಮಕಾತಿಗೂ ಸಹ ಪ್ರಸ್ತಾವ ಸಲ್ಲಿಸಲಾಗಿದೆ. ಜನಗಣತಿ ಕಾರ್ಯ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ಭೂಸ್ವಾಧೀನ, ಖಾತೆ ಬದಲಾವಣೆ ಸೇರಿದಂತೆ ಜಮೀನಿನ ವಿವಿಧ ಬಗೆಯ ಪ್ರಕ್ರಿಯೆಗಳನ್ನು ಗಣಕೀಕೃತಗೊಳಿಸುವ ‘ಭೂ ಇಂಡೀಕರಣ’ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಲಿದೆ. ‘ಸೀಮೆನ್ಸ್’ ಕಂಪೆನಿಯ ಸಹಯೋಗದೊಂದಿಗೆ ಯೋಜನೆ ಆರಂಭವಾಗಲಿದೆ. ಇದರಿಂದ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ ಭೂ ಮಾಲೀಕರಿಗೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯ ವಿವಿಧ ಹಂತಗಳನ್ನು ಮೊಬೈಲ್ ಎಸ್‌ಎಂಎಸ್ ಮೂಲಕ ಮೂಲ ಹಕ್ಕುದಾರರಿಗೆ ಮಾಹಿತಿ ರವಾನೆಯಾಗಲಿದೆ ಎಂದು ವಿವರಿಸಿದರು.

ತೀರ್ಪು ಸತ್ಯಕ್ಕೆ ದೊರಕಿದ ಜಯ
: ಐವರು ಪಕ್ಷೇತರ ಶಾಸಕರ ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪು ಸತ್ಯಕ್ಕೆ ದೊರಕಿದ ಜಯ. ಲಾಭಕ್ಕಾಗಿ ಎಲ್ಲ ಕಡೆ ನೆಗೆದಾಡುವ ಜನಪ್ರತಿನಿಧಿಗಳಿಗೆ ಇದೊಂದು ಪಾಠ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.