ADVERTISEMENT

‘ನನ್ನ ಮೈತುಂಬ ಗಾಯಗಳ ಸರಮಾಲೆ...’

ಹಳೆ ಬಸ್‌ ನಿಲ್ದಾಣ ಬಳಿಯ ರಸ್ತೆ ಸ್ವಗತ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:43 IST
Last Updated 20 ಡಿಸೆಂಬರ್ 2013, 5:43 IST

ಧಾರವಾಡ: ‘ನನ್ನ ಮೈತುಂಬ ಗಾಯಗಳ ಸರಮಾಲೆ. ಇಡೀ ಮೈ ನೋವುಗಳಿಂದಲೇ ತುಂಬಿ­ಕೊಂಡಿದೆ. ಇಡೀ ದೇಹವೇ ನಂಜು ಏರುವ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಮೇಲೆ ಓಡಾಡುವವರೆಲ್ಲ ಬರೀ ನನ್ನನ್ನು ಉಪಯೋಗಿ­ಸಿಕೊಳ್ಳುತ್ತಿದ್ದಾರಷ್ಟೆ. ಆದರೆ, ಗಾಯಗಳಿಗೆ ಔಷಧಿ ನೀಡಲು ಯಾರೂ ಮುಂದೆ ಬರುತ್ತಿಲ್ಲ’.

‘ನನ್ನ ಮೈ ಗಾಯಗೊಂಡು ಸುಮಾರು ವರ್ಷಗಳೇ ಕಳೆದಿವೆ. ಬ್ಯಾಂಡೇಜ್‌ (ತೇಪೆ) ಹಾಕುವುದು ಒತ್ತಟ್ಟಿಗಿರಲಿ. ತಾನು ಸುಧಾರಣೆ­ಯಾಗುವುದಂತೂ ಕನಸಿನ ಮಾತು ಎಂದು ಈ ರಸ್ತೆ ನೋವಿನಿಂದ ಹೇಳುತ್ತಿದೆ. ಹೌದು! ಇಡೀ ರಸ್ತೆಗಳ ತುಂಬೆಲ್ಲ ಈಗ ತಗ್ಗು, ಗುಂಡಿಗಳದ್ದೇ ದರ್ಬಾರ್‌. ಸಾಲದು ಎಂಬಂತೆ ಇದಕ್ಕೆ ದೂಳಿನ ಸಾಥ್‌ ಬೇರೆ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಈ ರಸ್ತೆ ಸಿಲುಕಿದ್ದರೂ ಯಾವ ಜನಪ್ರತಿನಿಧಿಯಾಗಲಿ ಅಥವಾ ಅಧಿಕಾರಿಗಳಾಗಲಿ ರಸ್ತೆ ಸುಧಾರಣೆ ಮಾಡುವ ಗೋಜಿಗೆ ಹೋಗಿಲ್ಲ.  ಯಾರನ್ನು ಕೇಳಿದರೂ ಬರೀ ಭರವಸೆಗಳ ಮಹಾಪೂರ ಹರಿಸುತ್ತಾರೆ’.

‘ಕಾಲಿಟ್ಟರೆ ಸಾಕು ಮೊಣಕಾಲುವರೆಗೆ ತಗ್ಗುಗಳೇ ಇವೆ. ಹಳೆ ಬಸ್‌ ನಿಲ್ದಾಣದಿಂದ ಜುಬಿಲಿ ವೃತ್ತದ ಕಡೆಗೆ ಯಾವುದಾದರೂ ಬೈಕ್‌ ಅಥವಾ ಆಟೊರಿಕ್ಷಾ ಜೋರಾಗಿ ಬಂದರೆ ಸಾಕು ಆ ವಾಹನದ ಚಾಲಕ ನೇರವಾಗಿ ಆಸ್ಪತ್ರೆಗೇ ಹೋಗಬೇಕು. ಸಾರಿಗೆ ವಾಹನಗಳಂತೂ ಸಾಗುತ್ತಿದ್ದರೆ ತಮ್ಮ ಹಿಂದಿನವರಿಗೆ ದೂಳಿನ ಅಭಿಷೇಕವನ್ನೇ ಮಾಡಿಸಿ ಹೋಗುತ್ತವೆ. ಪೂರ್ಣ ರಸ್ತೆ ಸುಧಾರಣೆ ಒಂದೆಡೆ ಇರಲಿ, ಮೊಣಕಾಲು­ವರೆಗೆ ಬಿದ್ದಿರುವ ತಗ್ಗುಗಳನ್ನಾದರೂ ಮುಚ್ಚುವಷ್ಟು ಸಮಯ ಜನಪ್ರತಿನಿಧಿಗಳಿಗೆ ಅಥವಾ ಅಧಿಕಾರಿಗಳಿಗೆ ಇಲ್ಲವೇ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ’.

‘ರಸ್ತೆ ಸುಧಾರಣೆಗೋಸ್ಕರ ಹಿಂದಿನ ಸಚಿವರಾಗಿದ್ದ ಸಂತೋಷ ಲಾಡ್‌, ಹದಗೆಟ್ಟ ರಸ್ತೆಗಳ ವೀಕ್ಷಣೆ ಮಾಡಿ ಹೋದರಷ್ಟೆ. ಆದರೆ, ಅವುಗಳ ಸುಧಾರಣೆ ಮಾತ್ರ ಕನಸಿನ ಮಾತಾಗಿ ಉಳಿದಿದೆ. ಇಲ್ಲಿನ ಸುಭಾಷ ರಸ್ತೆ, ಮರಾಠಾ ಕಾಲೊನಿ ರಸ್ತೆ, ಹಾಗೂ ಅನಿ ಬೆಸೆಂಟ್‌ ವೃತ್ತ ಸೇರಿದಂತೆ ನಗರದ ಭಾಗಶಃ ರಸ್ತೆಗಳ ಸ್ಥಿತಿಯಂತೂ ಹೇಳ ತೀರದು. ಎಷ್ಟೋ ವರ್ಷಗಳ ಹಿಂದೆ ಡಾಂಬರು ಹಾಕಿದ್ದ ರಸ್ತೆ ಈಗ ತಳಭಾಗದಲ್ಲಿ ಕಾಣುತ್ತಿದೆ. ಅಂದರೆ ಅಷ್ಟೊಂದು ಆಳಕ್ಕೆ ತಗ್ಗುಗಳು ಬಿದ್ದಿವೆ. ಇಷ್ಟೆಲ್ಲ ತೊಂದರೆಗಳ ಮಧ್ಯೆ ಸಾರ್ವಜನಿಕರು ಇಂಥ ರಸ್ತೆಗಳ ಮಧ್ಯೆ­ಯೇ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ ಸಾಗುತ್ತಿರುವುದು ಸಾಮಾನ್ಯವೇ ಆಗಿದೆ’.
---
ಹಿಂದಿನ ಸಚಿವರಾಗಿದ್ದ ಸಂತೋಷ ಲಾಡ್‌ ಅವರು ಇದೇ ಮಾರ್ಗವಾಗಿ ಸಾಕಷ್ಟು ಬಾರಿ ಅಡ್ಡಾಡಿದ್ದಾರೆ. ಆದರೆ, ಈ ರಸ್ತೆ ಸುಧಾರಣೆಗೋಸ್ಕರ ಅವರು ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ದ್ವಿಚಕ್ರ ವಾಹನ ಮತ್ತು ಆಟೊರಿಕ್ಷಾಗಳ ಮಧ್ಯೆ ಇಲ್ಲಿ ಅಪಘಾತ ಸಂಭವಿಸುವುದಂತೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ರಸ್ತೆ ಸುಧಾರಣೆಗೋಸ್ಕರ ಪಾಲಿಕೆಯವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅವರೂ ಕೂಡ ಕಿವಿಗೊಡದೇ ಕುಳಿತಿದ್ದಾರೆ.

-ಶಂಕರ ಇಜಂತಕರ, ಸ್ವೀಟ್‌ ಮಾರ್ಟ್‌ ವ್ಯಾಪಾರಿ

ಇಲ್ಲಿ ಧೂಳಿಗೆ ಏನೂ ಕಡಿಮೆ ಇಲ್ಲ. ಬೆಳಿಗ್ಗೆ ಬಂದು ವ್ಯಾಪಾರ ಮಾಡೋದಕ್ಕೆ ಕುಳಿತರೆ ಸಂಜೆ ಮನೆಗೆ ಹೋಗುವಾಗ ರಸ್ತೆಯ ಮೇಲಿರುವ ಮಣ್ಣೆಲ್ಲ ನಮ್ಮ ಮೈಮೇಲೆ ಇರುತ್ತದೆ. ಸುಮಾರು ವರ್ಷಗಳಿಂದ ಈ ರಸ್ತೆ ಸ್ಥಿತಿ ಹೀಗೆ ಇದೆ.
-ಹನುಮಂತಸಾ ಹಬೀಬ್‌, ಬೀದಿ ಬದಿ ವ್ಯಾಪಾರಿ

ADVERTISEMENT

ಈ ರಸ್ತೆಯಿಂದ ಕೇವಲ ಒಬ್ಬರಿಗೆ ಮಾತ್ರ ತೊಂದರೆಯಾದ್ರೆ ಸಹಿಸಬಹುದು ಆದರೆ, ದಿನಂಪ್ರತಿ ಪ್ರತಿಯೊಬ್ಬರೂ ತೊಂದರೆ ಅನುಭವಿಸುವಂತಾಗಿದೆ. ದಿನಗಳೆದಂತೆ ಈ ರಸ್ತೆ ಹದಗೆಡುತ್ತಿದೆ ವಿನಹಃ ರಸ್ತೆ ಮಾತ್ರ ಸುಧಾರಣೆಯಾಗುತ್ತಿಲ್ಲ. ಈ ರಸ್ತೆ ಸುಧಾರಣೆಯಾಗೊ ಸಮಯ ಯಾವಾಗ ಬರುತ್ತೋ ಗೊತ್ತಿಲ್ಲ’
-ಬಸವರಾಜ ಕಾಳೆ, ಶಿವಾನಂದನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.