ADVERTISEMENT

11 ಜೋಡಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಕುಕನೂರು: ಸಮೀಪದ ಬೆಣಕಲ್ ಗ್ರಾಮದ ಗುಡ್ಡದ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಸಿದ್ದಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 11 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ನೂತನ ದಂಪತಿಗಳಿಗೆ  ಶುಭ ಹಾರೈಸಿದರು. ನಂತರದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ನೂತನ ದಂಪತಿಗಳ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಜೊತೆಗೆ ಗ್ರಾಮದ ಪ್ರಮುಖ ದೇವಾಲಯಗಳಿಗೆ ತೆರಳಿ ದರ್ಶನ ಮಾಡಿಸಲಾಯಿತು.

ಸಾಮೂಹಿಕ ವಿವಾಹ ಆಗಿದ್ದರೂ  ವಧುವಿನ ಕಡೆಯವರು ಬಹಿರಂಗವಾಗಿಯೇ ವರೋಪಚಾರ ನೀಡುವುದರಲ್ಲಿ ನಿರತರಾಗಿದ್ದರು. ವಧುವಿಗಾಗಿ ಅಡುಗೆ ಸಾಮಾನು, ಅಲ್ಮೇರಾ, ಫ್ಯಾನ್, ಕುರ್ಚಿ, ಟೇಬಲ್, ಟಿ.ವಿ ಸೇರಿದಂತೆ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ಮೆರವಣಿಗೆಯ ಮೂಲಕ ತಂದು ಕೊಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗ್ರಾಮದ ಸುಮಂಗಲೆಯರಿಂದ ಕುಂಭೋತ್ಸವ ಆಯೋಜಿಸಲಾಗಿತ್ತು. ಬಾಜಾ-ಭಜಂತ್ರಿ, ಕರಡಿ ಮಜಲು, ಬಾಂಜ್ ಮೇಳ, ಡೊಳ್ಳು ಮತ್ತಿತರ ಮಂಗಲ ವಾದ್ಯಮೇಳಗಳು ಕುಂಭೋತ್ಸವಕ್ಕೆ ಮೆರಗು ನೀಡಿದ್ದವು. ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅನ್ನದಾನೇಶ್ವರ ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮದ ಜನಪ್ರತಿನಿಧಿಗಳು, ವಿವಿಧ ರಾಜಿಕೀಯ ಪಕ್ಷಗಳ ಮುಖಂಡರು, ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಗ್ರಾಮ ಪಂಚಾಯತಿ ವತಿಯಿಂದ ಕುಡಿಯುವ ನೀರು ಇತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹೋತ್ಸವವು ಶಾಂತಿಯುತವಾಗಿ ಜರುಗಲು ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮ ಕೈಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.