ADVERTISEMENT

ರೈತರಿಂದ ಅರೆಬೆತ್ತಲೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:38 IST
Last Updated 1 ಫೆಬ್ರುವರಿ 2018, 7:38 IST
ತೊಗರಿ ಖರೀದಿ ನೋಂದಣಿ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ರೈತರ ಸೇವಾ ಸಂಘ ಹಾಗೂ ರೈತ ಮುಖಂಡರು ಬುಧವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು
ತೊಗರಿ ಖರೀದಿ ನೋಂದಣಿ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ರೈತರ ಸೇವಾ ಸಂಘ ಹಾಗೂ ರೈತ ಮುಖಂಡರು ಬುಧವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು   

ಯಾದಗಿರಿ: ಜಿಲ್ಲೆಯಲ್ಲಿ ಸ್ಥಾಪಿಸಿರುವ ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ನೋಂದಣಿ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಬುಧವಾರ ರೈತರ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ನಗರದ ಸುಭಾಷಚಂದ್ರ ಬೋಸ್‌ ವೃತ್ತದಲ್ಲಿ ಮಾನವ ಸರಳಿ ನಿರ್ಮಿಸಿದ ರೈತರು ಜಿಲ್ಲಾಧಿಕಾರಿ ಕಚೇರಿಯವರೆಗೂ ಪಾದಯಾತ್ರೆ ನಡೆಸಿದರು.

ಜಿಲ್ಲೆಯಲ್ಲಿ ರೈತರ ತೊಗರಿ ಕಟಾವು ಮುಗಿದಿಲ್ಲ. ಆಗಲೇ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಅವಧಿ ಮುಗಿದಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಕೂಡಲೇ ಜಿಲ್ಲಾಡಳಿತ ಖರೀದಿ ನೋಂದಣಿ ಅವಧಿಯನ್ನು ವಿಸ್ತರಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

‘ಜ.10ರಂದು ಮದ್ದರಕಿ, ಚಪೆಟ್ಲಾ, ಸೈದಾಪುರ, ಹೋತಪೇಟ, ಶಿರವಾಳ ಗ್ರಾಮಗಳಿಗೆ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಆದೇಶಿಸಿದ್ದರೂ, ಅವುಗಳು ಇದುವರೆಗೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಆದರೆ, ಕೆಲವು ಸಹಕಾರ ಸಂಘಗಳು ರೈತರ ಹೆಸರು ನೋಂದಾಯಿಸಿಕೊಂಡಿವೆ. ಆದರೆ, ಇದುವರೆಗೂ ಒಂದು ಕೆ.ಜಿ. ತೊಗರಿ ಖರೀದಿಸಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

‘ಜಿಲ್ಲೆಯಲ್ಲಿ ಈಗ ಚಾಲ್ತಿಯಲ್ಲಿ ಇರುವ ಖರೀದಿ ಕೇಂದ್ರಗಳಲ್ಲಿ ರೈತರಿಂದ ₹4 ಕೆ.ಜಿ. ತೊಗರಿ ಸೂಟ್ ಎಂದು ಮತ್ತು ಪ್ರತಿ ಕ್ವಿಂಟಲ್‌ಗೆ ₹100 ಹಮಾಲಿಗೆಂದು ಆಯಾ ಖರೀದಿ ಕೇಂದ್ರದ ಕಾರ್ಯದರ್ಶಿಗಳು ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಇಂಥಾ ಅನ್ಯಾಯ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಕಣ್ಣೆತ್ತಿಯೂ ಖರೀದಿ ಕೇಂದ್ರಗಳತ್ತ ನೋಡಿಲ್ಲ. ಜಿಲ್ಲೆಯಲ್ಲಿನ ಖರೀದಿಕೇಂದ್ರಗಳಲ್ಲಿನ ಅವ್ಯವಸ್ಥೆ ಪರಿಶೀಲಿಸಿ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕಗೊಳ್ಳಬೇಕು’ ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.

ರಾಜ್ಯ ರೈತರ ಸೇವಾ ಸಂಘ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್, ಸಾಯಿರೆಡ್ಡಿ, ರಡಪತಿರೆಡ್ಡಿ, ಮಾಶಪ್ಪ, ಆಶಪ್ಪ, ಹಣಮಂತರೆಡ್ಡಿ, ನರಸಪ್ಪ, ಮಹೇಶ, ಹಣಮಂತ, ಮಾಣಿಕಪ್ಪ, ಸಾಬಣ್ಣ, ಸಾಬಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

* * 

ಖರೀದಿ ಕೇಂದ್ರಗಳಲ್ಲಿ ಕ್ವಿಂಟಲ್‌ಗೆ ₹4 ಕೆಜಿ ತೊಗರಿ ಸೂಟ್ ಮತ್ತು ಪ್ರತಿ ಕ್ವಿಂಟಲ್‌ಗೆ ಹಮಾಲಿ ದರ ₹100 ರೈತರಿಂದ ಸುಲಿಗೆ ಮಾಡುತ್ತಿರುವುದು ಅನ್ಯಾಯ.
ಲಕ್ಷ್ಮೀಕಾಂತ ಎ. ಪಾಟೀಲ್
ರಾಜ್ಯ ಉಪಾಧ್ಯಕ್ಷ, ರಾಜ್ಯ ರೈತ ಸೇವಾ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.