ADVERTISEMENT

ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆ ಸೇವೆ....

ಕೆ.ನರಸಿಂಹ ಮೂರ್ತಿ
Published 12 ಫೆಬ್ರುವರಿ 2018, 9:52 IST
Last Updated 12 ಫೆಬ್ರುವರಿ 2018, 9:52 IST
ಆರಾಧ್ಯ ರಂಗ ಬಳಗದ ಸದಸ್ಯರು ಬಳ್ಳಾರಿ ತಾಲ್ಲೂಕಿನ ದಮ್ಮೂರಿನ ವೀರಭದ್ರಗುಡಿಯ ಆವರಣದ ಮರದಿಂದ ತೆಗೆದ ಬಿಲ್ವಪತ್ರೆಗಳನ್ನು ಭಾನುವಾರ ವಿಂಗಡಿಸಿದರು
ಆರಾಧ್ಯ ರಂಗ ಬಳಗದ ಸದಸ್ಯರು ಬಳ್ಳಾರಿ ತಾಲ್ಲೂಕಿನ ದಮ್ಮೂರಿನ ವೀರಭದ್ರಗುಡಿಯ ಆವರಣದ ಮರದಿಂದ ತೆಗೆದ ಬಿಲ್ವಪತ್ರೆಗಳನ್ನು ಭಾನುವಾರ ವಿಂಗಡಿಸಿದರು   

ಬಳ್ಳಾರಿ: ಶಿವರಾತ್ರಿ ಹಬ್ಬಕ್ಕೆ ಒಂದು ದಿನ ಉಳಿದಿರುವಂತೆ ಶಿವಭಕ್ತರು ವಿಶೇಷ ರೀತಿಯಲ್ಲಿ ಭಕ್ತರ ಸೇವೆಗೆ ಸಜ್ಜಾಗಿದ್ದಾರೆ! ತಾವೊಬ್ಬರೇ ಹಬ್ಬ ಆಚರಣೆ ಮಾಡಿದರೆ ಸಾರ್ಥಕವಾಗಿ ಹಬ್ಬವನ್ನು ಆಚರಿಸಿದಂತೆ ಆಗುವುದಿಲ್ಲ ಎಂಬ ಉದ್ದೇಶದಿಂದ ಭಕ್ತ ಸಮುದಾಯಕ್ಕೆ ಪೂಜೆ ಸಲುವಾಗಿ ಬಿಲ್ವಪತ್ರೆಯನ್ನು ಉಚಿತವಾಗಿ ವಿತರಿಸಲಿದ್ದಾರೆ. ಅದಕ್ಕಾಗಿ ನಗರದ ಸುತ್ತಮುತ್ತ ಇರುವ ಬಿಲ್ಪಪತ್ರೆ ಮರಗಳು ಅವರ ಸೇವೆಗೆ ಬೆಂಬಲವಾಗಿ ನಿಂತಿವೆ.

ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿಯ ಆರಾಧ್ಯ ರಂಗಬಳಗದ ಸದಸ್ಯರು ನಾಲ್ಕು ವರ್ಷದಿಂದ ನಗರದ ದುರ್ಗಮ್ಮ ಗುಡಿ ಮುಂಭಾಗ ಶಿವರಾತ್ರಿಯ ದಿನ ಬೆಳಿಗ್ಗೆ ಭಕ್ತರಿಗೆ ಬಿಲ್ವಪತ್ರೆ ಮತ್ತು ಪಂಚಾಮೃತ ವಿತರಿಸುತ್ತಿದ್ದಾರೆ. ಇದೇ 13ರಂದು ಅವರ ಈ ಸೇವೆಯು ಐದನೇ ವರ್ಷಕ್ಕೆ ಕಾಲಿಡಲಿರುವುದು ವಿಶೇಷ.

‘ಐದು ವರ್ಷದ ಹಿಂದೆ ಶಿವರಾತ್ರಿಯಂದು ಬಳಗದ ಸದಸ್ಯರು ರುದ್ರಾಭಿಷೇಕ ಮಾಡಿ ಹಬ್ಬವನ್ನು ಆಚರಿಸಬೇಕು ಎಂದುಕೊಂಡೆವು. ಆದರೆ ನಾವಷ್ಟೇ ಮಾಡಿದರೆ ಪ್ರಯೋಜನವೇನು ಎಂಬ ಪ್ರಶ್ನೆ ಹುಟ್ಟಿತ್ತು. ಶಿವಭಕ್ತರಿಗೆ ನಮ್ಮ ಕೈಲಾದಷ್ಟು ಸೇವೆ ಮಾಡಬಹುದು ಎನ್ನಿಸಿತು. ಪರಿಣಾಮವಾಗಿ ಬಿಲ್ವಪತ್ರೆ ವಿತರಿಸಲು ನಿರ್ಧರಿಸಿದೆವು’ ಎಂದು ಬಳಗದ ಸದಸ್ಯ ಎಚ್‌.ಎಂ.ಅಮರೇಶ್‌ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.

ADVERTISEMENT

ಬಳಗದಲ್ಲಿರುವ ಅಮರೇಶ್‌, ತಿಪ್ಪೇಸ್ವಾಮಿ, ರಂಗಸ್ವಾಮಿ ರುದ್ರಮುನಿಸ್ವಾಮಿ ರಂಗಭೂಮಿ ಕಲಾವಿದರು. ಕುಮಾರಸ್ವಾಮಿ ರೈತರು. ಯುವರಾಜಗೌಡ ಛಾಯಾಗ್ರಾಯಕರು. ವಿವಿಧ ಕ್ಷೇತ್ರಗಳ ಹಿನ್ನೆಲೆಯ ಇವೆರೆಲ್ಲರೂ ಹಬ್ಬದ ಸಲುವಾಗಿ ಒಟ್ಟಾಗುವುದು ಮತ್ತೊಂದು ವಿಶೇಷ.

‘ಬೆಳಗಲ್‌ನಲ್ಲಿರುವ ಮರಗಳು ಮತ್ತು ಅಲ್ಲೀಪುರದ ಮಹದೇವತಾತನವರ ಮಠ ಹಾಗೂ ಸ್ಪಿನ್ನಿಂಗ್‌ ಮಿಲ್‌ನಲ್ಲಿರುವ ಮರಗಳಿಂದ ಬಿಲ್ವಪತ್ರೆಯನ್ನು ಸಂಗ್ರಹಿಸಿ ತಂದು ಭಕ್ತರಿಗೆ ನೀಡುತ್ತಿದ್ದೇವೆ. ನಮ್ಮ ಈ ಸೇವೆಗೆ ನಗರದ ರೆಡ್ಡಿಬೀದಿಯ ಪಂಪಾಪತಿ ಶಾಸ್ತ್ರಿಗಳೇ ಪ್ರೇರಣೆ’ ಎಂದು ತಿಳಿಸಿದರು. ಅವರೊಂದಿಗೆ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘವೂ ಕೈಜೋಡಿಸಿದೆ.

30 ವರ್ಷದಿಂದ ಬಿಲ್ಪಪತ್ರೆ ವಿತರಣೆ
ಬಳ್ಳಾರಿ:ನಗರದ ರೆಡ್ಡಿಬೀದಿಯ ನಿವೃತ್ತ ಶಿಕ್ಷಕ ಜೆ.ಎಂ.ಪಂಪಾಪತಿ ಶಾಸ್ತ್ರಿ ಮೂರು ದಶಕದಿಂದ ಭಕ್ತರಿಗೆ ಶಿವರಾತ್ರಿಯಂದು ಬಿಲ್ವಪತ್ರೆ ವಿತರಿಸುತ್ತಿದ್ದಾರೆ. ಮೇಟಿ ಬಸಪ್ಪ ಮೇಟಿ ದೊಡ್ಡಪ್ಪ ಛತ್ರದಲ್ಲಿ ಸಂಸ್ಕೃತ ಪಾಠಶಾಲೆ ನಡೆಸುವ ಅವರು ಅದಕ್ಕಾಗಿ ತಮ್ಮ ವಿದ್ಯಾರ್ಥಿಗಳ ನೆರವು ಪಡೆಯುತ್ತಾರೆ. ತಾಲ್ಲೂಕಿನ ದಮ್ಮೂರಿನಲ್ಲಿರುವ ವೀರಭದ್ರಸ್ವಾಮಿ ಗುಡಿಯಲ್ಲಿರುವ ಮರಗಳಿಂದ ಅವರು ಬಿಲ್ವಪತ್ರೆ ತರುತ್ತಾರೆ ಎಂದು ಅಮರೇಶ್ ತಿಳಿಸಿದರು.

12 ಲಿಂಗಗಳ ದರ್ಶನ
ಬಳ್ಳಾರಿ:ಶಿವರಾತ್ರಿ ಪ್ರಯುಕ್ತ ನಗರದಲ್ಲಿ ಫೆ.13ರಂದು 12 ಜ್ಯೋತಿರ್ಲಿಂಗಗಳೊಂದಿಗೆ ಶಾಂತಿ ಯಾತ್ರೆಯನ್ನು ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದೆ. ಅಂದು ಸಂಜೆ 4ರಿಂದ 7 ಗಂಟೆಯವರೆಗೂ ಯಾತ್ರೆ ನಡೆಯಲಿದೆ.  ಹಬ್ಬದ ಸಲುವಾಗಿಯೇ 14ರಿಂದ 18ರವರೆಗೆ ವಿಶ್ವವಿದ್ಯಾಲಯದ ಶಿವ ಜ್ಞಾನ ಮಂದಿರದಲ್ಲಿ ರಾಜಯೋಗ ಶಿಬಿರವನ್ನೂ ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 6ರಿಂದ 8 ಗಂಟೆಯವರೆಗೆ ಶಿಬಿರ ನಡೆಯಲಿದೆ.

* * 

ಶಿವನಾಮ ಸ್ಮರಣೆಯೊಂದಿಗೆ ಭಕ್ತರ ಸೇವೆಯನ್ನೂ ಮಾಡುವ ಉದ್ದೇಶದಿಂದಲೇ ಬಿಲ್ವಪತ್ರೆಯನ್ನು ಉಚಿತವಾಗಿ ವಿತರಿಸುತ್ತಿದ್ದೇವೆ
–ಎಚ್‌.ಎಂ.ಅಮರೇಶ್‌, ಆರಾಧ್ಯ ರಂಗಬಳದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.