ADVERTISEMENT

6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:25 IST
Last Updated 21 ಫೆಬ್ರುವರಿ 2011, 19:25 IST

ಮಡಿಕೇರಿ: ಕೇಂದ್ರದ ಮಾದರಿಯಲ್ಲಿ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಕೊಡಗು ಜಿಲ್ಲಾ ಅನುದಾನಿತ ಪ್ರೌಢಶಾಲಾ ನೌಕರರ ಒಕ್ಕೂಟ ಸೋಮವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎ. ಮೋಹನ್, ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟ್‌ನಾಯಕ್, ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಲಾಲ್‌ಕುಮಾರ್, ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ವಿಲ್‌ಫ್ರೆಡ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅವರನ್ನು ಭೇಟಿ ಮಾಡಿದ್ದ ನಿಯೋಗ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಮನವಿ ಪತ್ರ ಸಲ್ಲಿಸಿತು.

ಪ್ರೌಢಶಾಲಾ ಶಿಕ್ಷಕರಿಗೆ ಆಗಿರುವ ವೇತನ ತಾರತಮ್ಯ ನಿವಾರಿಸಬೇಕು. ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ಅನುದಾನಿತ ನೌಕರರಿಗೂ ನೀಡಬೇಕು. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿರುವ ಪ್ರೌಢಶಾಲೆಗಳನ್ನು ಪ್ರತ್ಯೇಕಗೊಳಿಸಿ ಉಪ ಪ್ರಾಂಶುಪಾಲರ ಹುದ್ದೆ ನೀಡಬೇಕು. ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ದರ, ಪರೀಕ್ಷಾ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಗಿರಿಭತ್ಯೆಯನ್ನು ಜಿಲ್ಲೆಯ ಎಲ್ಲಾ ಅನುದಾನಿತ ನೌಕರರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

2006ರ ನಂತರ ನೇಮಕಾತಿ ಹೊಂದಿದ ಎಲ್ಲಾ ಅನುದಾನಿತ ನೌಕರರಿಗೂ ಹೊಸ ಪಿಂಚಣಿ ನೀತಿ ಜಾರಿಗೆ ತರಬೇಕು. ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ಬೋಧಕ- ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು. 8ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿಯನ್ನು 25ರಿಂದ ಕನಿಷ್ಠ 20 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಬೇಕು. ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಗೆ ಒಂದು ಮುಂಬಡ್ತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಒಕ್ಕೂಟದ ಕಾರ್ಯದರ್ಶಿ ಪ್ರಶಾಂತ್, ಖಜಾಂಚಿ ಸೋಮಯ್ಯ ಮತ್ತಿತರರು ಇದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸರ್ಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.