ADVERTISEMENT

ಕಲಬುರಗಿ ವಿಮಾನ ನಿಲ್ದಾಣಕ್ಕೆ ಎರಡು ವರ್ಷ

ನಿಲ್ದಾಣ ಆರಂಭವಾದ ಬಳಿಕ 1,26,989 ಜನ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 3:48 IST
Last Updated 22 ನವೆಂಬರ್ 2021, 3:48 IST
2019ರ ನವೆಂಬರ್ 22ರಂದು ಬೆಂಗಳೂರಿನಿಂದ ಕಲಬುರಗಿಗೆ ಮೊದಲ ವಿಮಾನದಲ್ಲಿ ಬಂದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗೆಲುವಿನ ಚಿಹ್ನೆ ತೋರಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದ ಡಾ. ಉಮೇಶ ಜಾಧವ ಇದ್ದರು ಪ್ರಜಾವಾಣಿ ಸಂಗ್ರಹ ಚಿತ್ರ
2019ರ ನವೆಂಬರ್ 22ರಂದು ಬೆಂಗಳೂರಿನಿಂದ ಕಲಬುರಗಿಗೆ ಮೊದಲ ವಿಮಾನದಲ್ಲಿ ಬಂದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗೆಲುವಿನ ಚಿಹ್ನೆ ತೋರಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದ ಡಾ. ಉಮೇಶ ಜಾಧವ ಇದ್ದರು ಪ್ರಜಾವಾಣಿ ಸಂಗ್ರಹ ಚಿತ್ರ   

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣ ಆರಂಭವಾಗಿ ಇದೇ 22ಕ್ಕೆ ಎರಡು ವರ್ಷಗಳು ಭರ್ತಿಯಾಗಲಿದ್ದು, ಇಲ್ಲಿಯ
ವರೆಗೆ 1,26,989 ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಹೊರತುಪಡಿಸಿ ಅತಿ ಹೆಚ್ಚು ಪ್ರಯಾಣಿಕರು ಬಳಕೆ ಮಾಡಿದ ನಿಲ್ದಾಣವಾಗಿ ಕಲಬುರಗಿ ಶ್ರೇಯ ಪಡೆದುಕೊಂಡಿದೆ.

2019ರ ನವೆಂಬರ್ 22ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಮೊದಲಿಗೆ ಸ್ಟಾರ್‌ ಏರ್ ಬೆಂಗಳೂರು–ಕಲಬುರಗಿ ಮಧ್ಯೆ ಸಂಚಾರ ಆರಂಭಿಸಿತು. ನಂತರ ಕೆಲ ದಿನಗಳಲ್ಲಿ ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲ
ಯನ್ಸ್‌ ಏರ್ ವಿಮಾನವು ಬೆಂಗಳೂರು–ಕಲಬುರಗಿ ಮಧ್ಯೆ ಸಂಚಾರ ಆರಂಭಿಸಿತು. ಸ್ಟಾರ್‌ ಏರ್ ವಿಮಾನವು ಕಲಬುರಗಿಯಿಂದ ಬೆಂಗಳೂರು, ತಿರುಪತಿ ಹಾಗೂ ದೆಹಲಿಗೆ ಸಮೀಪದ ಹಿಂಡನ್ ಮಧ್ಯೆ ಸಂಚಾರ ನಡೆಸುತ್ತಿದೆ. ಅಲಯನ್ಸ್ ವಿಮಾನವು ಪ್ರಸ್ತುತ ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿದೆ. ನಿತ್ಯ ಮೂರು ವಿಮಾನಗಳು ಬಂದು ಹೋಗುತ್ತಿವೆ. ಎರಡು ವರ್ಷಗಳಲ್ಲಿ 3179 ಬಾರಿ ಪ್ರಯಾಣಿಕ ವಿಮಾನಗಳು ವೇಳಾಪಟ್ಟಿಯಂತೆ ಸಂಚರಿಸಿವೆ. 43 ಚಾರ್ಟರ್ಡ್‌ ವಿಮಾನ, ಎರಡು ಏರ್ ಆಂಬುಲೆನ್ಸ್‌ಗಳು ಬಂದಿವೆ.

ಈ ನಿಲ್ದಾಣದಲ್ಲಿ ವಿಮಾನ ತರಬೇತಿಯನ್ನೂ ನಡೆಸುವುದನ್ನು ಗಮನದಲ್ಲಿಟ್ಟುಕೊಂಡು ರನ್‌ವೇ ಸಿದ್ಧಪಡಿಸಲಾಗಿತ್ತು. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಕರೆದಿದ್ದ ಹರಾಜಿನಲ್ಲಿ ರೆಡ್‌ ಬರ್ಡ್‌ ಹಾಗೂ ಎಪಿಎಫ್‌ಟಿಎ ಸಂಸ್ಥೆಗಳು ವಿಮಾನಯಾನ ತರಬೇತಿ ನೀಡಲು ಅನುಮತಿ ಪಡೆದುಕೊಂಡಿವೆ. ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ ಕೆಲವೇ ತಿಂಗಳಲ್ಲಿ ಸಾಕಾರಗೊಳ್ಳಲಿದೆ ಎನ್ನುತ್ತಾರೆ ವಿಮಾನ ನಿಲ್ದಾಣದ ನಿರ್ದೇಶಕ ಎಸ್‌. ಜ್ಞಾನೇಶ್ವರ ರಾವ್.

ADVERTISEMENT

ಮುಂಬೈ ವಿಮಾನ ರದ್ದು: ಅಲಯನ್ಸ್‌ ಏರ್ ಸಂಸ್ಥೆಯು ಕೆಲಕಾಲ ಕಲಬುರಗಿ–ಮುಂಬೈ ಮಧ್ಯೆ ವಿಮಾನ ಸಂಚಾರವನ್ನು ಆರಂಭಿಸಿತ್ತಾದರೂ ಕೋವಿಡ್‌ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಗಾಗಿ ಸಂಚಾರ ರದ್ದು
ಗೊಳಿಸಿತು. ಈ ಮಾರ್ಗದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಮತ್ತೆ ಪುನರಾ
ರಂಭಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ 742 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ, ರನ್‌ ವೇ, ನಿಯಂತ್ರಣ ಕೊಠಡಿಯನ್ನು ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ₹ 181 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದು, ಭಾರತೀಯ ವಿಮಾಣ ನಿಲ್ದಾಣ ಪ್ರಾಧಿಕಾರಕ್ಕೆ
ಹಸ್ತಾಂತರಿಸಿದೆ.

ಆಗಬೇಕಿರುವುದೇನು?

ಕಲಬುರಗಿ ವಿಮಾನ ನಿಲ್ದಾಣದಿಂದ ನಿತ್ಯ ಮುಂಬೈಗೆ ವಿಮಾನ ಸಂಚಾರ ಆರಂಭವಾಗಬೇಕಿದೆ. ಅಲ್ಲದೇ, ಗೋವಾ, ಕೇರಳ, ತಮಿಳುನಾಡು, ಗುಜರಾತ್‌ಗಳಿಗೆ ವಿಮಾನ ಸಂಚಾರ ಆರಂಭವಾದರೆ ನಗರದಲ್ಲಿ ನೆಲೆಸಿರುವ ಆ ರಾಜ್ಯದವರು ಕಡಿಮೆ ಅವಧಿಯಲ್ಲಿ ತೆರಳಬಹುದಾಗಿದೆ. ಸರಕು ಸಾಗಣೆಯ ಕಾರ್ಗೊ ವಿಮಾನಗಳ ಸೇವೆಯನ್ನು ಆರಂಭಿಸಿದರೆ ಇಲ್ಲಿಂದ ಹೆಚ್ಚು ಬೆಲೆ ದೊರೆಯುವ ಮಾರುಕಟ್ಟೆಗೆ ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳನ್ನು ಸಾಗಿಸಬಹುದಾಗಿದೆ. ಅಲ್ಲದೇ, ರಾತ್ರಿ ವಿಮಾನ ಇಳಿಯುವ ವ್ಯವಸ್ಥೆಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು ಎನ್ನುತ್ತಾರೆ ನಿವೃತ್ತ ಎಂಜಿನಿಯರ್ ವೆಂಕಟೇಶ ಮುದಗಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.