ADVERTISEMENT

ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:35 IST
Last Updated 18 ಫೆಬ್ರುವರಿ 2011, 9:35 IST

ಬಾಗಲಕೋಟೆ: ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ನವೀಕರಿಸಬೇಕು ಹಾಗೂ ಪ್ರತಿ ತಿಂಗಳು ಐದನೇ ತಾರೀಕಿನೊಳಗೆ ವೇತನ ಬಿಡುಗಡೆಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

“ಸ್ನಾತಕೋತ್ತರ ಪದವಿ ಅಂಕಗಳ ಆಧಾರದ ಮೇಲೆ ಸರ್ಕಾರಿ ಕಾಲೇಜುಗಳಲ್ಲಿ ಪ್ರತಿವರ್ಷ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಒಂದು ವರ್ಷ ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಂದಿನ ವರ್ಷ ಅವಕಾಶ ಕೈತಪ್ಪುತ್ತಿದೆ. ಆದ್ದರಿಂದ ಒಮ್ಮೆ ನೇಮಕಗೊಂಡ ಅಭ್ಯರ್ಥಿಗಳನ್ನು ಪ್ರತಿವರ್ಷ ಮುಂದುವರಿಸಬೇಕು” ಎಂದು ಉಪನ್ಯಾಸಕರು ಒತ್ತಾಯಿಸಿದರು.

ಸೆಮಿಸ್ಟರ್-ನಾನ್ ಸೆಮಿಸ್ಟರ್ ಪದ್ಧತಿಯಿಂದಾಗಿ ಹೊಸ ಅಭ್ಯರ್ಥಿಗಳ ಅಂಕಗಳು ಸಹಜವಾಗಿಯೇ ಹೆಚ್ಚಾಗಿರುತ್ತವೆ. ಇದರಿಂದ ಹಳೆ ಅಭ್ಯರ್ಥಿಗಳು ನೇಮಕಾತಿಯಿಂದ ವಂಚಿತರಾಗುತ್ತಿದ್ದು, ಇದನ್ನು ತಪ್ಪಿಸಬೇಕಾದರೆ ನೇಮಕಾತಿ ಪ್ರಕ್ರಿಯೆ ಪ್ರತಿವರ್ಷ ನಡೆಸುವ ಬದಲು ಹಳಬರನ್ನೇ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿಕೊಂಡರು.

ವಯೋಮಿತಿ ಹೆಚ್ಚಳಕ್ಕೆ ಮನವಿ
ಪದವಿ ಕಾಲೇಜುಗಳ ಉಪನ್ಯಾಸಕರಾಗಬೇಕಾದರೆ ಪದವಿ ಬಳಿಕ ದೀರ್ಘಾವಧಿಯ ಸಂಶೋಧನೆ ಪೂರ್ಣಗೊಳಿಸಬೇಕಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಥಮ ದರ್ಜೆ ಕಾಲೇಜುಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 45 ವರ್ಷದವರೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಅತಿಥಿ ಉಪನ್ಯಾಸಕರು ಪ್ರತಿಪಾದಿಸಿದರು.

2005ರಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು; ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ 9 ತಿಂಗಳು ವೇತನ ನೀಡುವ ಬದಲು 12 ತಿಂಗಳೂ ವೇತನ ನೀಡಬೇಕು; ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಹಿಂದೆ ನೀಡಿದಂತೆ ವರ್ಷಕ್ಕೊಂದರಂತೆ ಕೃಪಾಂಕ ಹಾಗೂ ಸೇವಾ ದೃಢೀಕರಣ ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಮನವಿಪತ್ರ ಸ್ವೀಕರಿಸಿದರು. ಜಿಲ್ಲಾ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ವೆಂಕನಗೌಡ ಸಣ್ಣಸಕ್ಕರಗೌಡರ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ವಿವರಿಸಿದರು. ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಉನ್ನತ ಶಿಕ್ಷಣ ಸಚಿವರು ಸ್ಪಷ್ಟ ಭರವಸೆ ನೀಡುವರೆಗೂ ತರಗತಿಗಳನ್ನು ಬಹಿಷ್ಕರಿಸಿ ಧರಣಿ ಮುಂದುವರಿಸುವುದಾಗಿ ಸಂಘದ ಅಧ್ಯಕ್ಷ ಡಾ.ವೆಂಕನಗೌಡ ಸಣ್ಣಸಕ್ಕರಪ್ಪಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಪೂಜಾರ, ಗೌರವಾಧ್ಯಕ್ಷ ಡಾ. ಸದಾಶಿವ ಸಜ್ಜನ, ಸಂಘಟನಾ ಕಾರ್ಯದರ್ಶಿ ಡಾ.ಗೋಪಾಲ ಪೂಜಾರ, ಖಜಾಂಚಿ ಜಿ.ಎಸ್. ಮುಡಪಲದಿನ್ನಿ, ಪಿ.ಎನ್.ರಾಠೋಡ, ಅರವಿಂದ ಕಡಕೋಳ, ವಿ.ಎಸ್. ತೊರಗಲ್ಲ, ಶ್ರೀದೇವಿ ಗದುಗಿ, ಕವಿತಾ ಜುಕ್ತಿಮಠ ಸೇರಿದಂತೆ ಜಿಲ್ಲೆಯ 13 ಸರ್ಕಾರಿ ಪದವಿ ಕಾಲೇಜುಗಳ 250ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.