ADVERTISEMENT

‘ಅಧಿಕಾರದ ಅಟ್ಟ’ಕ್ಕೇರಲು ಸಕ್ಕರೆ ಕಾರ್ಖಾನೆ ಏಣಿ!

ಉದ್ದಿಮೆ ಜೊತೆಗೆ ರಾಜಕಾರಣದಲ್ಲೂ ಬೆಳೆಯುವ ಜರೂರತ್ತು; ಜನರನ್ನು ಸೆಳೆಯಲು ನೇತಾರರಿಂದ ನಾನಾ ಕಸರತ್ತು

ವೆಂಕಟೇಶ್ ಜಿ.ಎಚ್
Published 17 ಏಪ್ರಿಲ್ 2018, 5:22 IST
Last Updated 17 ಏಪ್ರಿಲ್ 2018, 5:22 IST

ಬಾಗಲಕೋಟೆ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೃಷ್ಣಾ ತೀರದಲ್ಲಿ ಸಕ್ಕರೆ ಲಾಬಿ ಸದ್ದು ಮಾಡುತ್ತಿದೆ. 70ರ ದಶಕದಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪಾತ್ರದಲ್ಲಿ ನೀರಾವರಿ ಸೌಲಭ್ಯ ಹೆಚ್ಚಾದ ನಂತರ ಕಬ್ಬು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ತಲೆ ಎತ್ತಿವೆ. ಜೊತೆಗೆ ರಾಜಕಾರಣದಲ್ಲೂ ‘ಪ್ರಭಾವಿ’ ಪಾತ್ರ ವಹಿಸಿವೆ.

ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳ ಪೈಕಿ 10 ಕಾರ್ಖಾನೆಗಳ ಆಡಳಿತ ಚುಕ್ಕಾಣಿ ಪ್ರಮುಖ ರಾಜಕೀಯ ಮುಖಂಡರ ಹಿಡಿತದಲ್ಲಿದೆ. ಅವರಲ್ಲಿ ಬಹುತೇಕರು ಈ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ. ಕಾರ್ಖಾನೆ ಷೇರುದಾರರು, ಸಿಬ್ಬಂದಿ ಹಾಗೂ ಕಬ್ಬು ಪೂರೈಸುವ ರೈತರೇ ಇವರಿಗೆ ಪ್ರಮುಖ ಮತ ಬ್ಯಾಂಕ್.

ಮೊದಲ ಚುನಾವಣೆಯಲ್ಲೇ ನಂಟು: ಸಕ್ಕರೆ ಉದ್ಯಮ ಹಾಗೂ ರಾಜಕಾರಣದ ನಂಟು, ಜಿಲ್ಲೆಯಲ್ಲಿ 1952ರ ಚುನಾವಣೆಯಿಂದಲೇ ಕಾಣಸಿಗುತ್ತದೆ. ಬೀಳಗಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ (1952–1972) ಯಡಹಳ್ಳಿಯ ಆರ್.ಎಂ.ದೇಸಾಯಿ, ಬೆಳಗಾವಿ ಜಿಲ್ಲೆ ಅಥಣಿ ಬಳಿ 1945ರಲ್ಲಿ ಆರಂಭವಾದ ಉಗಾರ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿದ್ದರು. ಇದು ಉತ್ತರ ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆ. 1972ರಲ್ಲಿ ಮುಧೋಳ ತಾಲ್ಲೂಕು ಸಮೀರವಾಡಿಯ ಸೋಮಯ್ಯ ಶುಗರ್ಸ್ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ತಲೆಯೆತ್ತಿದವು. ಅವುಗಳ ಸ್ಥಾಪನೆಯಲ್ಲಿ ರಾಜಕಾರಣಿಗಳೇ ಮುಂಚೂಣಿಯಲ್ಲಿದ್ದಾರೆ.

ADVERTISEMENT

ಜಿಲ್ಲೆಯ ಪ್ರಮುಖರಾದ ಜೆ.ಟಿ.ಪಾಟೀಲ, ಶಾಮನೂರು ಮಲ್ಲಿಕಾರ್ಜುನ, ಮುರುಗೇಶ ನಿರಾಣಿ, ಎಸ್‌.ಆರ್‌.ಪಾಟೀಲ, ಶಿವಕುಮಾರ ಮಲಘಾಣ, ಸಿದ್ದು ನ್ಯಾಮಗೌಡ, ಬಿ.ಬಿ.ಚಿಮ್ಮನಕಟ್ಟಿ ಮುಂತಾದವರೆಲ್ಲರೂ ಸಕ್ಕರೆ ಕಾರ್ಖಾನೆಗಳ ಒಡೆಯರು ಅಥವಾ ಅವುಗಳೊಂದಿಗೆ ನಂಟು ಹೊಂದಿದವರು.

ಉದ್ಯಮ ವಲಯಕ್ಕೆ ಸರ್ಕಾರ ನಿಗದಿಪಡಿಸಿರುವ ಸಾಮಾಜಿಕ ಹೊಣೆಗಾರಿಕೆಯೇ (ಸಿಎಸ್‌ಆರ್‌) ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ವೇದಿಕೆ ಆಗಿದೆ. ಆರೋಗ್ಯ ಶಿಬಿರ, ವೃತ್ತಿ ತರಬೇತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯದಂತಹ ಮೂಲ ಸೌಕರ್ಯ ಕಲ್ಪಿಸುವಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಅವರು ಜನರ ಸಂಪರ್ಕಕ್ಕೆ ಬರುತ್ತಾರೆ. ಅದಕ್ಕಾಗಿ ಫೌಂಡೇಷನ್‌, ಟ್ರಸ್ಟ್‌, ಸೊಸೈಟಿ ಹೆಸರಿನ ಸಂಸ್ಥೆಗಳನ್ನು ರಚಿಸಿಕೊಂಡಿದ್ದಾರೆ. ಕ್ರಮೇಣ ಅದೇ ಒಡನಾಟವನ್ನು ರಾಜಕೀಯ ಬೆಳವಣಿಗೆಗೆ ಮೆಟ್ಟಿಲಾಗಿಸಿಕೊಳ್ಳುತ್ತಾರೆ.

ಸಿಎಸ್‌ಆರ್ ಚಟುವಟಿಕೆ, ಉದ್ಯಮ ವಲಯ ಸಮಾಜಕ್ಕೆ ಸಂದಾಯ ಮಾಡಲೇಬೇಕಾದ ಅನಿವಾರ್ಯ ಋಣ. ಅದನ್ನು ಅರಿಯದ ಫಲಾನುಭವಿಗಳು, ಸಂಕಷ್ಟದಲ್ಲಿ ನೆರವಿನ ಹಸ್ತ ಚಾಚಿದವರ ಋಣಭಾರ ತಮ್ಮ ಮೇಲಿದೆ ಎಂದು ಭಾವಿಸಿ, ಅವರು ಹೇಳಿದವರಿಗೇ ಮತ ಹಾಕಿ ಕೈ ತೊಳೆದುಕೊಳ್ಳುತ್ತಾರೆ.

ಆ ಪ್ರದೇಶದಲ್ಲಿ ತಮ್ಮದೇ ಜಾತಿ– ಧರ್ಮದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮಾಲೀಕರೇ ನೇರವಾಗಿ ಚುನಾವಣಾ ಕಣಕ್ಕಿಳಿಯುತ್ತಾರೆ. ಇಲ್ಲವೇ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಿಸುತ್ತಾರೆ. ಹೀಗೆ ಗೆದ್ದವರು ಕಬ್ಬಿನ ಬೆಲೆ ನಿಗದಿ, ಸಕ್ಕರೆ ಮಾರುಕಟ್ಟೆ ನಿಯಂತ್ರಣ, ರೈತರ ಬಾಕಿ ಪಾವತಿ, ಸರ್ಕಾರದ ಪಾಲು ನಿಗದಿ... ಹೀಗೆ ಎಲ್ಲಾ ಹಂತದಲ್ಲೂ ಮತ ಹಾಕಿದವರ ಪರ ನಿಲ್ಲದೇ ಮತ ಹಾಕಿಸಿದವರೊಂದಿಗೆ ಕೈ ಜೋಡಿಸಬೇಕಾಗುತ್ತದೆ.

ಸಕ್ಕರೆ ಕಾರ್ಖಾನೆ ಮಾಲೀಕರೇ ಶಾಸಕರು, ಸಚಿವರಾಗಿ ಆಯ್ಕೆಯಾಗುತ್ತಾರೆ. ಹಾಗಾಗಿ ಕಬ್ಬಿನ ಬೆಲೆ, ಸಕ್ಕರೆ ಲೆವಿ ನಿಗದಿ, ಕಬ್ಬಿನ ಉಪ ಉತ್ಪನ್ನಗಳ ಬೆಲೆ, ಕಾರ್ಖಾನೆಗಳಿಗೆ ಬಡ್ಡಿ ರಹಿತ ಸಾಲ ನೀಡಿಕೆ ಎಲ್ಲ ವಿಚಾರಗಳಲ್ಲೂ ಸರ್ಕಾರವು ಮಾಲೀಕರ ಹಿತ ಕಾಯತ್ತದೆ. ಇಲ್ಲಿ ರೈತರ ಹಿತ ಗೌಣವಾಗುತ್ತದೆ – ಸುಭಾಷ್ ಶಿರಬೂರ, ರಾಜ್ಯ ಕಬ್ಬು ನಿಯಂತ್ರಣ ಮಂಡಳಿ ಸದಸ್ಯ, ಮುಧೋಳ.

ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಿರುತ್ತದೆ. ಹಾಗಾಗಿ ಕಾರ್ಖಾನೆ ಮಾಲೀಕರಿಗೂ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ. ಹಲವು ಮಾಲೀಕರು ಸ್ವತಃ ಕಬ್ಬು ಬೆಳೆಗಾರರಾದ್ದರಿಂದ ಅವರಿಗೆ ರೈತರ ಸಂಕಷ್ಟ ಗೊತ್ತು. ಜೊತೆಗೆ ಸಾರ್ವಜನಿಕ ಬದುಕಿನಲ್ಲಿರುವುದರಿಂದ ಬೆಳೆಗಾರರ ಹಿತ ಕಾಪಾಡಲೇ ಬೇಕಾಗುತ್ತದೆ. ಹಾಗಾಗಿ ಇಲ್ಲಿ ಸಕ್ಕರೆ ಲಾಬಿ ಪ್ರಶ್ನೆ ಗೌಣ – ಮಲ್ಲಿಕಾರ್ಜುನ ಹೆಗ್ಗಳಗಿ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಬೆಳಗಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.